ಜನವರಿ22, 2025
ರಘುಪತಿ ರಾಘವ ರಾಜಾರಾಮ್
ಪತೀತ ಪಾವನ ಸೀತಾರಾಂ ||
ಈಶ್ವರ್ ಅಲ್ಲಾ ತೆರೊ ನಾಮ್
ಸಬ್ಕೋ ಸನ್ಮತಿ ದೇ ಭಗವಾನ್
||
ರಾಮನ ಭಕ್ತರೆಂದು ಕರೆಯಿಸಿಕೊಂಡ
ಗಾಂಧೀಜಿಯವರು ಈ ಗೀತೆಯನ್ನ ಎಲ್ಲರಿಗೂ ಕೇಳಿಸಿ ರಾಮ ನಾಮ ಜಪ ಮಾಡುತ್ತಿದ್ದರು. ರಾಮ ಮತ್ತು ರಾಮರಾಜ್ಯದ
ಬಗ್ಗೆ ಹತ್ತಾರು ಕಡೆ ಮಾತನಾಡಿದ್ದಾರೆ ಮತ್ತು ಬರೆದಿದ್ದಾರೆ. ರಾಮನ ಬಗ್ಗೆ ಅದೆಷ್ಟು
ಮಾತಾಡಿದ್ದಾರೆಂದರೆ ಇತಿಹಾಸಕಾರರು ಗಾಂಧೀಜಿಯವರು ರಾಮನ ಪರಮ ಭಕ್ತರೆಂದೇ ಚಿತ್ರಿಸಿ
ತೋರಿಸಿದ್ದಾರೆ. ಗಾಂಧೀಜಿಯವರು ತಮ್ಮ ಜೀವನದ ಕೊನೆಯ ಕ್ಷಣದಲ್ಲಿ “ಹೇ ರಾಮ್” ಎಂದು
ಉದ್ಗರಿಸಿದರೆಂದು ನಮಗೆ ತಿಳಿಸಲಾಗುತ್ತದೆ. ಎಲ್ಲ ಇತಿಹಾಸಕಾರರು ಗಾಂಧೀಜಿಯವರ ಪತ್ರಗಳು,
ಪ್ರಾರ್ಥನಾ ಸಭೆಯ ಭಾಷಣಗಳು ಮತ್ತು ಅವರ ಬರಹಗಳನ್ನ ಆಧಾರವಾಗಿಟ್ಟುಕೊಂಡೇ ಅಭಿಪ್ರಾಯ ಮಂಡಿಸುತ್ತಾರೆ. ಆದರೆ ರಾಮರಾಜ್ಯದ ಬಗ್ಗೆ
ಗಾಂಧೀಜಿಯವರು ಆಳವಾಗಿ ಮತ್ತು ಸ್ಪಷ್ಟವಾಗಿ ಪ್ರತಿಪಾದಿಸಿದ ಎಷ್ಟೋ ವಿಷಯಗಳು ವಿಮರ್ಶೆಯಿಂದ
ತಪ್ಪಿಸಿಕೊಂಡಿವೆ. ನಿಜವಾಗಿ ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆ ಎನಾಗಿತ್ತು ಎಂಬುದನ್ನ ಅವರ
1929ರ ಭೊಪಾಲ್ ಮತ್ತು 1947 ರ ಹೈಂಚಾರ್ ಭಾಷಣಗಳಿಂದ ತಿಳಿಯಬಹುದು.
ಭೋಪಾಲ್
ಸಾರ್ವಜನಿಕ ಸಭೆ: ಸೆಪ್ಟೆಂಬರ್ 10,
1929 ರಂದು ಭೊಪಾಲ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತಾಡುತ್ತಾ ಗಾಂಧೀಜಿಯವರು ಹೀಗೆ
ವಿವರಿಸುತ್ತಾರೆ;
“ನನ್ನ ಪ್ರಕಾರ ರಾಮರಾಜ್ಯವೆಂದರೆ ಅದು ಹಿಂದೂ ರಾಜ್ಯವಲ್ಲ,
ಬದಲಿಗೆ ಅದು ದೇವರ ರಾಜ್ಯ. ನನಗೆ ರಾಮ ಮತ್ತು ರಹಿಮ ಎರಡೂ ಒಂದೇ. ಸತ್ಯ ಮತ್ತು
ಸನ್ನಡತೆಯ ಏಕ ದೇವನಲ್ಲದೆ ಬೇರೆ ಯಾವ ದೇವರನ್ನೂ ನಾನು ಒಪ್ಪುವುದಿಲ್ಲ. ನನ್ನ ಕಲ್ಪನೆಯ
ರಾಮ ಈ ಭೂಮಿಯ ಮೇಲೆ ಬದುಕಿದ್ದನೋ ಅಥವಾ ಇಲ್ಲವೋ ಗೊತ್ತಿಲ್ಲ,
ಆದರೆ ಪುರಾತನ ಸಮಯದ ಆದರ್ಶ ರಾಮರಾಜ್ಯವು ಒಂದು ನಿಜವಾದ ಪ್ರಜಾಪ್ರಭುತ್ವವಾಗಿತ್ತು. ಅಲ್ಲಿ
ಪ್ರತಿ ಪ್ರಜೆಯೂ ಯಾವುದೇ ಸಮಯ ವಿಳಂಬವಿಲ್ಲದ
ಮತ್ತು ದುಬಾರಿಯಲ್ಲದ ಕಾರ್ಯವಿಧಾನದಿಂದ ನ್ಯಾಯ ಪಡೆಯುವರು. ಅಲ್ಲಿ ನಾಯಿಯೂ ಕೂಡ ನ್ಯಾಯ
ಪಡೆಯಿತೆಂದು ಕವಿ ವರ್ಣಿಸಿದ್ದಾನೆ.” (Young
India,
19-9-1929) (Collected Works of Mahatma Gandhi, Volume 47, ಪುಟ 41)
ಗಾಂಧೀಜಿಯವರು ಇಲ್ಲಿ ತಾವೇ
ಹೇಳಿರುವಂತೆ ಅವರ ಕಲ್ಪನೆಯ ರಾಮ ಎಂದಾದರೂ ಭೂಮಿಯ ಮೇಲೆ ಬದುಕಿದ್ದನೋ ಅಥವಾ ಇಲ್ಲವೋ ಎನ್ನುವುದು
ಅವರಿಗೆ ಗೊತ್ತಿಲ್ಲ, ಅಂದರೆ ಅವರ ಪಾಲಿಗೆ
ರಾಮನೊಬ್ಬ ಕಾಲ್ಪನಿಕ ವ್ಯಕ್ತಿ ಹಾಗೂ ರಾಮಾಯಣ ಒಂದು ಮಹಾಕಾವ್ಯವಷ್ಟೆ. ರಾಮ ಮತ್ತು ರಹಿಮ ಎರಡೂ
ಒಂದೇ ಎನ್ನುತ್ತಿದ್ದ ಗಾಂಧೀಜಿ ಬಯಸಿದ್ದು ದೇವರ ರಾಜ್ಯವನ್ನು (Kingdom of God). ಈ ದೇವರ ಸಾಮ್ರಾಜ್ಯವನ್ನ ಗಾಂಧೀಜಿಯವರು ಮತ್ತಷ್ಟು ಸ್ಪಷ್ಟವಾಗಿ ವಿವರಿಸಿದ್ದು
ದಶಕಗಳ ನಂತರ 1947 ರಲ್ಲಿ.
ಹೈಂಚಾರ್ ಪ್ರಾರ್ಥನಾ ಸಭೆ: ಮತ್ತೊಮ್ಮೆ ಫೆಬ್ರುವರಿ 26, 1947 ರಂದು ಬಂಗಾಳದ ಹೈಂಚಾರ್ ಪ್ರಾರ್ಥನಾ ಸಭೆಯಲ್ಲಿ ಮಾತಾಡುತ್ತಾ ಗಾಂಧೀಜಿಯವರು
ತಮ್ಮ ಪರಿಕಲ್ಪನೆಯ ರಾಮರಾಜ್ಯದ ವಿಸ್ತಾರವಾದ ವಿವರಣೆ ಕೊಡುತ್ತಾರೆ.
ಗಾಂಧೀಜಿಯವರು ತಮ್ಮ ಆದರ್ಶ ಸಮಾಜಕ್ಕೆ ರಾಮರಾಜ್ಯ ಎಂದು
ಹೆಸರಿಸಿದರು. “ರಾಮ ರಾಜ್ಯವೆಂದರೆ ಹಿಂದೂಗಳ ಆಡಳಿತವೆಂದು ತಿಳಿಯುವ ತಪ್ಪನ್ನು
ಯಾರೂ ಮಾಡಬಾರದು. ಖುದಾ ಅಥವಾ ಗಾಡ್ ಅನ್ನುವುದು ನನ್ನ ರಾಮನಿಗಿರುವ ಇತರೆ ಹೆಸರುಗಳು. ನನಗೆ,
ಭೂಮಿಯ ಮೇಲಿರುವ ದೇವರ ಸಾಮ್ರಾಜ್ಯದಂತೆ ಖುದಾನ ಆಡಳಿತ ಬೇಕು. ಇದನ್ನು
ತಕ್ಕ ಮಟ್ಟಿಗೆ ಮೊದಲ ನಾಲ್ಕು ಖಲೀಫರ ಆಡಳಿತಕ್ಕೆ ಹೋಲಿಸಬಹುದು. ಇಂತ
ರಾಜ್ಯದ ಸ್ಥಾಪನೆಯಿಂದ ಕೇವಲ ಭಾರತೀಯ ಜನರಿಗಷ್ಟೆ ಅಲ್ಲದೆ ಇಡೀ ಪ್ರಪಂಚದ
ಕಲ್ಯಾಣವಾಗುವುದು” ಎಂದು ಪ್ರತಿಪಾದಿಸಿದರು. (Collected Works of Mahatma Gandhi, Volume 94, ಪುಟ 46)
ಏಪ್ರಿಲ್ 28, 1946 ರಂದು ಹರಿಜನ ಪತ್ರಿಕೆಯಲ್ಲಿ ಪ್ರಕಟವಾದ ಮತ್ತೊಂದು ಲೇಖನದಲ್ಲಿ
ಗಾಂಧೀಜಿಯವರು ತಾವು ಮಾತನಾಡಿದ ರಾಮನಿಗೂ ರಾಜ ದಶರಥನ ಮಗ,
ಅಯೋಧ್ಯೆಯ ಆಡಳಿತಗಾರನಾದ ಐತಿಹಾಸಿಕ ರಾಮನಿಗೂ ಯಾವುದೇ ಸಂಭಂದವಿಲ್ಲವೆಂದು
ಮತ್ತೊಮ್ಮೆ ಸ್ಪಷ್ಟೀಕರಿಸುತ್ತಾರೆ.
ಗಾಂಧೀಜಿಯವರ ಕಾಲದಲ್ಲೂ ರಾಮಜನ್ಮ
ಭೂಮಿಯಲ್ಲಿ ರಾಮ ಮಂದಿರ ಕಟ್ಟಲು ಹೋರಾಟ ಮಾಡುತ್ತಿದ್ದ ಜನರಿದ್ದರು. ಗಾಂಧೀಜಿಯವರ ರಾಮ ಧುನ್
ಕೇಳಿ ಅವರೊಬ್ಬ ಪರಮ ರಾಮ ಭಕ್ತರೆಂದೇ ಭಾವಿಸಿದವರಿದ್ದರೂ,
ಇನ್ನೊಂದೆಡೆ ರಾಮ ಕಾಲ್ಪನಿಕ, ರಾಮರಾಜ್ಯವೆಂದರೆ ಅದು ಹಿಂದೂಗಳ ರಾಜ್ಯವಲ್ಲವೆಂದು ಅರ್ಥ
ಮಾಡಿಕೊಂಡ ರಾಮ ಭಕ್ತರು ಅದೆಷ್ಟು ನೊಂದುಕೊಂಡಿರಬಹುದು. ಅಂತೂ,
ಐದು ಶತಮಾನಗಳ ನಿರಂತರ ಹೋರಾಟದ ಪರಿಣಾಮ ಜನವರಿ 22,
2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯಾಯಿತು. ಈ ವೇಳೆ ಹಿನ್ನೆಲೆಯಲ್ಲಿ
ಪ್ರಸಾರವಾದ
ರಘುಪತಿ ರಾಘವ ರಾಜಾರಾಮ್
ಪತೀತ ಪಾವನ ಸೀತಾರಾಂ ||
ಸುಂದರ ವಿಗ್ರಹ ಮೇಘಶ್ಯಾಮ್
ಗಂಗಾ ತುಳಸಿ ಸಾಲಿಗ್ರಾಂ ||
ಎಂಬ ಮೂಲ ಗೀತೆ ಕೇಳಿ ನನ್ನಂತೆಯೇ
ಸಾಕಷ್ಟು ರಾಮ ಭಕ್ತರಿಗೆ ಸ್ವಲ್ಪ ನೆಮ್ಮದಿ ಕೊಟ್ಟಿರಬಹುದು. ಆ ದಿನ ರಾಮ ಮಂದಿರ ಮತ್ತು ರಾಮಧುನ್
ಎರಡನ್ನೂ ಸರಿಪಡಿಸಲಾಯಿತು. ಭಾರತೀಯ ಸಂಸ್ಕೃತಿಗೆ ಸಂಭಂದಿಸಿದ ವಿಷಯಗಳನ್ನ ಸರಿಪಡಿಸಿದ್ದು
ಸ್ವಲ್ಪವೇ, ಸರಿಪಡಿಸಬೇಕಾಗಿದ್ದು ಸಾಕಾಷ್ಟಿದೆ.
ರಾಮರಾಜ್ಯಕ್ಕೆ ಜಯವಾಗಲಿ..!!
- ಕಿರಣ್ ಬಿ

No comments:
Post a Comment