Wednesday, June 10, 2026

ವಿಜ್ಞಾನ ಸಾರಿದ ವೇದಾಂತ: ನಾವೆಲ್ಲರೂ ಒಂದೇ ತಾಯಿಯ ಮಕ್ಕಳು

12 June, 2026


ವಿಜ್ಞಾನ ಸಾರಿದ ವೇದಾಂತ: ನಾವೆಲ್ಲರೂ ಒಂದೇ ತಾಯಿಯ ಮಕ್ಕಳು

ಭಾರತಿಯರೆಲ್ಲರು ಒಂದೇ ತಾಯಿಯ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ಎಂದು ಹೇಳಿದಾಗ ಅದು ಖಂಡಿತವಾಗಿ ಉತ್ಪ್ರೇಕ್ಷೆ ಅಲ್ಲ, ಅದು ಸರಳವಾದ ವಿಜ್ಞಾನ ಮತ್ತು ಅದ್ಬುತವಾದ ಭಾವನೆ. ಹೌದು, ಆಧುನಿಕ ತಳೀಯ ವಿಜ್ಞಾನ (Genetics) ಮತ್ತು ಭಾರತದ ಸನಾತನ ಸಾಂಸ್ಕೃತಿಕ ಚಿಂತನೆಗಳು ಇಂದು ಒಂದೇ ಜಾಗದಲ್ಲಿ ಬಂದು ಸಂಧಿಸುತ್ತಿವೆ. ನಾವು ಯುಗಯುಗಗಳಿಂದ ಯಾರನ್ನು "ಭಾರತ ಮಾತೆ" ಎಂದು ಪೂಜಿಸುತ್ತಿದ್ದೇವೆಯೋಆಕೆ ಕೇವಲ ಭಾವನಾತ್ಮಕ ಕಲ್ಪನೆಯಲ್ಲಬದಲಿಗೆ ನಮ್ಮ ರಕ್ತದ ಕಣಕಣದಲ್ಲೂ ಜೀವಂತವಾಗಿ ಹರಿಯುತ್ತಿರುವ ವೈಜ್ಞಾನಿಕ ಸತ್ಯ ಎಂಬುದನ್ನು ಇತ್ತೀಚಿನ DNA ಸಂಶೋಧನೆಗಳು ಅತ್ಯಂತ ಸ್ಪಷ್ಟವಾಗಿ ಸಾಬೀತುಪಡಿಸಿವೆ. 4500 ವರ್ಷಗಳ ಹಳೆಯ ರಾಖಿಗರ್ಹಿಯಲ್ಲಿ ದೊರೆತ ಆಸ್ತಿಪಂಜರಗಳಿಂದ ಹಿಡಿದು ಇಂದಿನ ಆಧುನಿಕ ಭಾರತೀಯರ DNA ವರೆಗಿನ ಸಂಶೋಧನೆಗಳು ಅತ್ಯಂತ ವೈಜ್ಞಾನಿಕವಾಗಿ ಸಾರುತ್ತಿರುವ ಒಂದು ಪರಮ ಸತ್ಯವೆಂದರೆ — "ಭಾರತದ ಮಣ್ಣಿನ ಹೆಣ್ಣುಮಕ್ಕಳು ಇಲ್ಲಿನ ಮೂಲ ನಿವಾಸಿಗಳುಮತ್ತು ನಾವೆಲ್ಲರೂ ಒಂದೇ ತಾಯಿಯ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು." 

1. ಇಂದಿನ ಸಾಮಾಜಿಕ ಮಾನಸಿಕತೆ ಮತ್ತು ಜಾತಿಯ ಪರಿಮಿತಿಗಳು

ಇಂದಿನ ಆಧುನಿಕ ಭಾರತದಲ್ಲಿ ನಾವು ಬಾಹ್ಯವಾಗಿ ಎಷ್ಟೇ ಮುಂದುವರಿದಿದ್ದರೂಮಾನಸಿಕವಾಗಿ ಇಂದಿಗೂ ಜಾತಿಉಪಜಾತಿ ಮತ್ತು ಪ್ರಾಂತ್ಯಗಳ ಕೃತಕ ಪರಿಮಿತಿಗಳ ಒಳಗೇ ಬಂಧಿಯಾಗಿದ್ದೇವೆ. ಮದುವೆರಾಜಕಾರಣಸಾಮಾಜಿಕ ಒಡನಾಟಗಳಲ್ಲೆಲ್ಲಾ "ನಮ್ಮ ಜಾತಿ ಬೇರೆನಿಮ್ಮ ಜಾತಿ ಬೇರೆ" ಎಂಬ ಭೇದಭಾವದ ಗೋಡೆಗಳು ನಮ್ಮನ್ನು ಸದಾ ಪ್ರತ್ಯೇಕಿಸುತ್ತಿರುತ್ತವೆ. ನಮ್ಮ ರಕ್ತವೇನೋ ಭಿನ್ನವಾಗಿದೆಒಬ್ಬರಿಗಿಂತ ಒಬ್ಬರು ಶ್ರೇಷ್ಠ ಅಥವಾ ಕನಿಷ್ಠ ಎಂಬ ತಪ್ಪು ಕಲ್ಪನೆಗಳು ಇಂದಿಗೂ ನಮ್ಮ ಸಮಾಜದ ಸಾಮರಸ್ಯವನ್ನು ಕೆಡಿಸುತ್ತಿವೆ. ಪರಸ್ಪರ ಅಪನಂಬಿಕೆ ಮತ್ತು ಜಾತ್ಯತೀತ ಮತ್ಸರಗಳು ನಮ್ಮ ಸಾಮಾಜಿಕ ಮಾನಸಿಕತೆಯನ್ನು ಸಂಕುಚಿತಗೊಳಿಸಿವೆ. ಆದರೆಈ ಎಲ್ಲಾ ಕೃತಕ ಗೋಡೆಗಳನ್ನು ವಿಜ್ಞಾನವು ಇಂದು ಒಂದೇ ಒಂದು ಜೀನ್ ಪರೀಕ್ಷೆಯ ಮೂಲಕ ಸಂಪೂರ್ಣವಾಗಿ ಧೂಳೀಪಟ ಮಾಡಿದೆ.

2. ವಿಜ್ಞಾನದ ಸಾಕ್ಷಿ: ಒಂದೇ ತಾಯಿಯ ಮಕ್ಕಳು (The Genetic Reality of mtDNA)

ಆಧುನಿಕ ಜೆನೆಟಿಕ್ಸ್ ಪರೀಕ್ಷೆಯಲ್ಲಿ ತಾಯಿಯ ಕಡೆಯಿಂದ ಮಾತ್ರ ಹರಿದುಬರುವ ಮಾತೃವಂಶದ DNA (mtDNA - Haplogroup M) ಅನ್ನು ವಿಶ್ಲೇಷಿಸಿದಾಗ ವಿಜ್ಞಾನ ಲೋಕವೇ ಬೆರಗಾಗುವ ಸತ್ಯವೊಂದು ಹೊರಬಿದ್ದಿದೆ.ಭಾರತದಲ್ಲಿ ಇಂದು ಸಹಸ್ರಾರು ಜಾತಿಗಳುಶ್ರೇಣೀಕೃತ ಸಾಮಾಜಿಕ ಸ್ತರಗಳು ಇರಬಹುದು. ಪಿತೃವಂಶದ (Y-DNA) ಆಧಾರದಲ್ಲಿ ಪುರುಷರ ಜೀನ್‌ಗಳಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸಗಳಿರಬಹುದು. ಆದರೆಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆಸಮಾಜದ ಎಲ್ಲಾ (ಕೃತಕವಾಗಿ ನಿರ್ಮಿತ ಮೇಲೂ ಕೀಳೂ) ವರ್ಗದವರೆಗಿನ ಪ್ರತಿಯೊಂದು ಜಾತಿಯ ಮಹಿಳೆಯರ DNA ಪರೀಕ್ಷಿಸಿದಾಗ ಶೇಕಡಾ 70% ರಿಂದ 90% ರಷ್ಟು ಒಂದೇ ರೀತಿಯ 'M' ಹ್ಯಾಪ್ಲೋಗ್ರೂಪ್ ಕಂಡುಬರುತ್ತದೆ.

ಇದರ ಅರ್ಥವೇನೆಂದರೆಹೊರಗಿನಿಂದ ಬಂದ ಜೀನ್‌ಗಳು ಅಥವಾ ತಳೀಯ ವಲಸೆಗಳು (Genetic migrations)ಇಲ್ಲಿನ ಪುರುಷರ ಜೀನ್ ಸಂರಚನೆಯನ್ನು ಆಂಶಿಕವಾಗಿ ಬದಲಿಸಿರಬಹುದುಆದರೆ ಭಾರತದ ಹೆಣ್ಣುಮಕ್ಕಳ ರಕ್ತ ಶೇಕಡಾ 80% ಕ್ಕಿಂತ ಹೆಚ್ಚು ಶುದ್ಧವಾಗಿ ಹತ್ತಾರು ಸಾವಿರ ವರ್ಷಗಳಿಂದ ಇಲ್ಲೇ ಉಳಿದುಕೊಂಡಿದೆ. ಸಾಮಾಜಿಕವಾಗಿ ನಾವು ಬೇರೆ ಬೇರೆ ಸಮುದಾಯದ ಗಂಡುಮಕ್ಕಳಾಗಿ ಕಾಣಿಸುತ್ತಾ ಜಾತಿಯ ಮೌಢ್ಯದಲ್ಲಿ ಕಿತ್ತಾಡುತ್ತಿರಬಹುದು,ಆದರೆ ತಳೀಯವಾಗಿ ನಾವೆಲ್ಲರೂ ಸುಮಾರು 60,000ವರ್ಷಗಳ ಹಿಂದೆ ಈ ಪುಣ್ಯಭೂಮಿಯಲ್ಲಿ ನೆಲೆಸಿದ ಆ ಒಬ್ಬಳೇ ಒಂದು ಪ್ರಾಚೀನ ಜಗನ್ಮಾತೆಯ ಹೆಮ್ಮೆಯ ವಂಶಸ್ಥರು!

ಅಂಡಮಾನ್ ಬುಡಕಟ್ಟು ಜನಾಂಗ: ಭಾರತದ ಜೀವಂತ "ಟೈಮ್ ಕ್ಯಾಪ್ಸುಲ್"

ಅಂಡಮಾನಿನ ಜರಾವಾ (Jarawa), ಓಂಗೆ (Onge) ಮತ್ತು ಸೆಂಟಿನೆಲಿಸ್ (Sentinelese) ಬುಡಕಟ್ಟು ಜನಾಂಗದ DNAಪರೀಕ್ಷೆ ಆಶ್ಚರ್ಯಕರವಾದ ಮತ್ತು ರೋಚಕವಾದ ಫಲಿತಾಂಶ ಕೊಟ್ಟಿದೆ. ಇವರು ಸುಮಾರು 60,000 ವರ್ಷಗಳಿಂದ ಜಗತ್ತಿನ ಬೇರೆ ಯಾವುದೇ ನಾಗರಿಕತೆಯೊಂದಿಗೆ ಸಂಪರ್ಕವಿಲ್ಲದಿದ್ದರೂ, ವಿಜ್ಞಾನಿಗಳು ಇವರ DNA ಪರೀಕ್ಷಿಸಿದಾಗಇವರಲ್ಲಿ ಪಿತೃವಂಶದ ಪಿತೃವಂಶದ ಜೀನ್ 100% ರಷ್ಟು ಭಾರತದ ಮೂಲ ನಿವಾಸಿಗಳ (AASI) ಜೀನ್ ಇರುವುದು ಪತ್ತೆಯಾಗಿದೆ ಅಂದರೆ ಭಾರತದ ಮುಖ್ಯ ಭೂಮಿಯಲ್ಲಿ ಕಂಡುಬರುವ Haplogroup R1A, L ಅಥವಾ J2 ಕಂಡುಬರುವುದಿಲ್ಲ. ಆದರೆ ಇವರಲ್ಲಿರುವ ಮಾತೃವಂಶದ ಜೀನ್ ಮತ್ತು ಇಂದಿನ ಮುಖ್ಯಭೂಮಿಯ (ಕರ್ನಾಟಕತಮಿಳುನಾಡು ಅಥವಾ ಉತ್ತರ ಭಾರತದ) ಸಾಮಾನ್ಯ ಜನರ ಒಳಗೆ ಹರಿಯುತ್ತಿರುವ 'Haplogroup M' ಜೀನ್ ಒಂದೇ ಮೂಲಕ್ಕೆ ಸೇರಿದ್ದಾಗಿದೆ!!

3 . ಭಾರತೀಯ ಚಿಂತನೆಯಲ್ಲಿ ಹೆಣ್ಣು: ಪ್ರಕೃತಿ ಮತ್ತು ಶಕ್ತಿ

ಜಗತ್ತಿನ ಇತರ ಸಂಸ್ಕೃತಿಗಳು ಭೂಮಿಯನ್ನು ಕೇವಲ ಒಂದು ಭೋಗದ ವಸ್ತುವಾಗಿ ನೋಡಿದಾಗಭಾರತ ಮಾತ್ರ ಮಣ್ಣನ್ನು 'ತಾಯಿಎಂದು ಕರೆದು ಪೂಜಿಸಿತು. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಎಂದರೆ ಕೇವಲ ವ್ಯಕ್ತಿಯಲ್ಲಆಕೆ'ಪ್ರಕೃತಿ' ಮತ್ತು 'ಶಕ್ತಿ'.

  • ನದಿಗಳೇ ತಾಯಂದಿರು: ನಮಗೆ ನದಿಗಳು ಕೇವಲ ನೀರಿನ ಮೂಲಗಳಲ್ಲಗಂಗೆಯಮುನೆಗೋದಾವರಿಕೃಷ್ಣೆಕಾವೇರಿ — ಎಲ್ಲವೂ ನಮಗೆ ತಾಯಂದಿರು. ಜೀವಜಲವನ್ನು ಕೊಟ್ಟು ಈ ದೇಶದ ಮಕ್ಕಳನ್ನು ಸಲಹುವ ಜೀವರಾಶಿಯೇ ಹೆಣ್ಣಿನ ಸ್ವರೂಪ.
  • ಪ್ರಕೃತಿಯೇ ಮಾತೆ: ಕಾಡುಬೆಟ್ಟಮಣ್ಣು ಎಲ್ಲವನ್ನೂ ನಾವು ಪ್ರಕೃತಿ ಮಾತೆ ಎಂದು ಕರೆಯುತ್ತೇವೆ. ಪುರುಷನನ್ನು 'ಪುರುಷ' (ಸ್ಥಿರ ಶಕ್ತಿ) ಎಂದರೆಈ ಜಗತ್ತನ್ನು ಚಲನಶೀಲವಾಗಿಸುವಸೃಷ್ಟಿ ಮಾಡುವ ಶಕ್ತಿಯನ್ನು 'ಪ್ರಕೃತಿ' (ಹೆಣ್ಣು) ಎಂದು ಕರೆಯಲಾಗಿದೆ.
  • ಭಾರತ ಮಾತೆ: ನಾವು ನಮ್ಮ ದೇಶವನ್ನು 'ಫಾದರ್‌ಲ್ಯಾಂಡ್' (Fatherland) ಎನ್ನದೆ'ಮದರ್‌ಲ್ಯಾಂಡ್' (Motherland) ಅಥವಾ'ಭಾರತ ಮಾತೆ' ಎಂದು ಕರೆಯುತ್ತೇವೆ. ಭೂಮಿಯ ನಕ್ಷೆಗೆ ತಾಯಿಯ ರೂಪ ಕೊಟ್ಟುಆಕೆಯ ಮಡಿಲಲ್ಲಿ ನಾವೆಲ್ಲರೂ ಆಡುತ್ತಿದ್ದೇವೆ ಎಂದು ಭಾವಿಸುವುದು ಭಾರತೀಯರಿಗೆ ರಕ್ತಗತವಾಗಿ ಬಂದಿರುವ ಸಂಸ್ಕಾರ.

4. 'ವಂದೇ ಮಾತರಂಮತ್ತು 'ಭಾರತ್ ಮಾತಾ ಕಿ ಜೈ' — ಏಕತೆಯ ಮಹಾಘೋಷ

ನಾವು ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದಲೂ ಕೂಗುತ್ತಾ ಬಂದಿರುವ "ಭಾರತ್ ಮಾತಾ ಕಿ ಜೈ" ಮತ್ತು "ವಂದೇ ಮಾತರಂ" (ತಾಯೇ ನಿನಗೆ ವಂದನೆ) ಎಂಬ ಘೋಷಣೆಗಳು ಕೇವಲ ರಾಜಕೀಯ ಘೋಷಣೆಗಳಲ್ಲ. ಅವು ನಮ್ಮೊಳಗಿನ ಜೀನ್ ಸತ್ಯದ ಪ್ರಕಟಣೆಗಳು!

"ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ... ಕಮಲಾ ಕಮಲದಲವಿಹಾರಿಣೀ..." ಎಂದು ಬಂಕಿಮಚಂದ್ರರು ವಂದೇ ಮಾತರಂ ಗೀತೆಯಲ್ಲಿ ಬರೆದಾಗಅವರು ಈ ದೇಶದ ಮಣ್ಣನ್ನೇ ಸಾಕ್ಷಾತ್ ದುರ್ಗೆ ಮತ್ತು ಲಕ್ಷ್ಮಿಯನ್ನಾಗಿ ಕಂಡರು.

ನಾವು "ಭಾರತ್ ಮಾತಾ ಕಿ ಜೈ" ಎಂದು ಕೂಗಿದಾಗ, "ನನ್ನನ್ನು ಹೆತ್ತಸಾಕಿ ಲಾಲಿಸಿದನನ್ನ ರಕ್ತದಲ್ಲಿ ಹಾಸುಹೊಕ್ಕಾಗಿರುವ ನನ್ನ ಇಡೀ ತಾಯಂದಿರ ಪರಂಪರೆಗೆ ಜಯವಾಗಲಿ" ಎಂದು ಸಾರುತ್ತೇವೆ. ಈ ಘೋಷಣೆಯನ್ನು ಕೂಗುವ ಪ್ರತಿಯೊಬ್ಬ ಭಾರತೀಯನೂ ಪರೋಕ್ಷವಾಗಿ ತಾನು ಮತ್ತೊಬ್ಬ ಭಾರತೀಯನ ಒಡಹುಟ್ಟಿದ ಸಹೋದರ ಎಂಬುದನ್ನು ಒಪ್ಪಿಕೊಳ್ಳುತ್ತಾನೆ. ಏಕೆಂದರೆತಾಯಿ ಒಬ್ಬಳೇ ಆದಾಗ ಅವಳ ಮಕ್ಕಳೆಲ್ಲರೂ ಸೋದರರಾಗಬೇಕಲ್ಲವೇ?

5. ಸಾಮಾಜಿಕ ಸಾಮರಸ್ಯದ ಅನಿವಾರ್ಯತೆ: ಒಂದೇ ತಾಯಿಯ ಮಕ್ಕಳು ನಾವು

ಇಂದಿನ ಭಾರತಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಬೇಕಿರುವುದು ಸಾಮಾಜಿಕ ಸಾಮರಸ್ಯ. ನಮ್ಮ ಜಾತಿಗಳ ಕೃತಕ ಪರಿಮಿತಿಗಳನ್ನು ದಾಟಿ "ಒಂದೇ ತಾಯಿಯ ಮಕ್ಕಳು ನಾವುಸೋದರರಂತೆ ನಾವೆಲ್ಲ" ಎಂಬ ಭಾವನೆ ಮೂಡಬೇಕಿದೆ. ತಾಯಿಯ ಮಡಿಲಿಗೆ ಬಂದಾಗ ಈ ಎಲ್ಲಾ ಭೇದಭಾವದ ಗೋಡೆಗಳು ಕರಗಿ ಹೋಗಲೇಬೇಕು. ಒಬ್ಬ ತಾಯಿಗೆ ತನ್ನ ಮಕ್ಕಳು ಯಾವುದೇ ಜಾತಿ ಅಥವಾ ಆಚರಣೆಗಳನ್ನು ಹೊಂದಿರಲಿ ಅವರೆಲ್ಲರೂ ಸಮಾನರೇ.

ಆಧುನಿಕ ವಿಜ್ಞಾನದ ಈ mtDNA Haplogroup M ಎಂಬ ಉಲ್ಲೇಖವು ನಮಗೆ ಸಾರುತ್ತಿರುವುದು ಇದನ್ನೇ: "ನಿಮ್ಮ ಮೇಲ್ನೋಟದ ಜಾತಿಯ ಗುರುತುಗಳು ಏನೇ ಇರಲಿನಿಮ್ಮೆಲ್ಲರ ಮಹಾತಾಯಿ ಒಬ್ಬಳೇ." ಈ ಜ್ಞಾನವು ನಮ್ಮಲ್ಲಿ ಪರಸ್ಪರ ದ್ವೇಷವನ್ನು ಕಡಿಮೆ ಮಾಡಿಸೋದರತ್ವದ ಮಹತ್ವವನ್ನು ತಿಳಿಸಿಕೊಡುಬೇಕಿದೆ. ಒಬ್ಬಳೇ ಮೂಲ ತಾಯಿಯ ರಕ್ತವನ್ನು ಹಂಚಿಕೊಂಡಿರುವ ಸಹೋದರರು ಜಾತಿಯ ಹೆಸರಿನಲ್ಲಿ ಕಿತ್ತಾಡುವುದು ಹೆತ್ತ ತಾಯಿಗೆ ಮಾಡುವ ಅಪಮಾನವಲ್ಲವೇ?

ಮಣ್ಣಿನ ಹೆಮ್ಮೆತಾಯಿಯ ಋಣ

ಇಂದು ವಿಜ್ಞಾನವು ನಮಗೆ ನೀಡಿರುವ ಈ ಜ್ಞಾನವು ನಮ್ಮಲ್ಲಿ ಹೆಮ್ಮೆ ಮತ್ತು ಪರಸ್ಪರ ಗೌರವವನ್ನು ಮೂಡಿಸಬೇಕಿದೆ. ಭಾರತದ ಹೆಣ್ಣು ಈ ದೇಶದ ಸಂಸ್ಕೃತಿಯನ್ನುಭಾಷೆಯನ್ನುಅಂಡಮಾನಿನ ದ್ವೀಪಗಳಿಂದ ಹಿಡಿದು ಕನ್ಯಾಕುಮಾರಿಯವರೆಗಿನ ಇತಿಹಾಸವನ್ನು ತನ್ನ ಗರ್ಭದಲ್ಲಿ ಕಾಯ್ದುಕೊಂಡು ಬಂದಿದ್ದಾಳೆ.

ನಾವು ಕನ್ನಡಿಗರಿರಲಿತಮಿಳರಿರಲಿಪಂಜಾಬಿಗಳಿರಲಿ ಅಥವಾ ಬಂಗಾಳಿಗಳಿರಲಿನಮ್ಮ ಜಾತಿ-ಮತಗಳು ಭಿನ್ನವಾಗಿರಲಿ — ನಮ್ಮ ತಾಯಿಯ ರಕ್ತ ಒಂದೇ. ಈ ಜೀನ್ ಸಂಬಂಧವೇ ನಮ್ಮನ್ನು ಕಾಶ್ಮೀರದಿಂದ ಅಂಡಮಾನ್ ವರೆಗೆ ಒಂದು ಅದೃಶ್ಯ ದಾರದಲ್ಲಿ ಕಟ್ಟಿ ಹಾಕಿದೆ. ಇನ್ಮುಂದೆಯಾದರೂ ನಾವು ಜಾತಿಯ ಪರಿಮಿತಿಗಳನ್ನು ಮರೆತು ಸಾಮರಸ್ಯದಿಂದ ಬಾಳೋಣ.

ಭಾರತ್ ಮಾತಾ ಕಿ ಜೈ! ವಂದೇ ಮಾತರಂ!

Wednesday, June 3, 2026

ಕರ್ನಾಟಕಕ್ಕೂ ಲಗ್ಗೆ ಇಟ್ಟ ಅಕ್ರಮ ನುಸುಳುಕೋರರ ಸಮಸ್ಯೆ

 

ಉತ್ತರ ಪ್ರಭ:

03 ಜೂನ್, 2026

ಇತ್ತೀಚೆಗೆ ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಆಶ್ರಯ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಪೊಲೀಸ್ ಇಲಾಖೆಯು ವಿಶೇಷ ತಂಡವನ್ನು ರಚಿಸಿ, ಈ ಭಾಗದಲ್ಲಿರುವ ಅಪರಿಚಿತ ಬಂಗಾಳಿ ಭಾಷಿಕರ ತಪಾಸಣೆಗೂ ಮುಂದಾಗಿದೆ.

ಇದೇ ಹೊತ್ತಿನಲ್ಲಿ, ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದು, ಇದರ ವಿರುದ್ಧ ಕರ್ನಾಟಕದಾದ್ಯಂತ ಕೆಲವು ವಲಯಗಳಿಂದ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಇಲ್ಲಿ ನಾವೆಲ್ಲರೂ ಕೇಳಿಕೊಳ್ಳಬೇಕಾದ ಮುಖ್ಯ ಪ್ರಶ್ನೆ: ಈ ಪರಿಷ್ಕರಣೆಯಿಂದ ತೊಂದರೆಯಾಗುವುದು ಯಾರಿಗೆ? ಒಬ್ಬ ಸಾಮಾನ್ಯ ಭಾರತೀಯ ನಾಗರಿಕನಿಗೆ ಇದರಿಂದ ಯಾವುದೇ ಸಮಸ್ಯೆಯಾಗಲು ಸಾಧ್ಯವಿಲ್ಲ. ಇದು ಕೇವಲ ಮೃತಪಟ್ಟವರ ಅಥವಾ ಊರು ಬಿಟ್ಟು ಹೋದವರ ಹೆಸರುಗಳನ್ನು ತೆಗೆದುಹಾಕಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಸರಳ ಪ್ರಕ್ರಿಯೆ. ಹಾಗಿದ್ದ ಮೇಲೆ, ಕರ್ನಾಟಕದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗಳು ಅಕ್ರಮ ಬಾಂಗ್ಲಾದೇಶಿಗರಿಗೆ ಸಿಕ್ಕಿರಬಹುದಾದ 'ಮತದಾನದ ಹಕ್ಕನ್ನು' ರಕ್ಷಿಸುವ ವ್ಯವಸ್ಥಿತ ಪ್ರಯತ್ನವೇ ಎಂಬ ಗಂಭೀರ ಸಂಶಯ ಮೂಡುವುದು ಸಹಜ. ಇದನ್ನು ಆಳವಾಗಿ ಅರ್ಥಮಾಡಿಕೊಳ್ಳಲು ನಾವು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಇತಿಹಾಸವನ್ನು ಒಮ್ಮೆ ತಿರುವಿ ಹಾಕಬೇಕಾಗುತ್ತದೆ.


ಇತಿಹಾಸದ ಪಾಠ: ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಅನುಭವ

ಅಕ್ರಮ ವಲಸಿಗರು ಕೇವಲ ದೇಶದ ಭದ್ರತೆಗೆ ಸವಾಲಷ್ಟೇ ಅಲ್ಲ, ಸ್ಥಳೀಯ ಜನಸಂಖ್ಯೆ ಮತ್ತು ಸಂಸ್ಕೃತಿಯ ಸ್ವರೂಪವನ್ನೇ ಬದಲಾಯಿಸಬಲ್ಲರು ಎಂಬುದಕ್ಕೆ ಅಸ್ಸಾಂ ಮತ್ತು ಬಂಗಾಳದ ಇತಿಹಾಸವೇ ಸಾಕ್ಷಿ. ಸ್ವಾತಂತ್ರ್ಯ ಪೂರ್ವದಲ್ಲಿ, ಅಂದರೆ 1937ರಲ್ಲಿ ಅಂದಿನ ಅಸ್ಸಾಂ ಸರ್ಕಾರದ ಮುಖ್ಯಸ್ಥರಾಗಿದ್ದ ಸಯ್ಯದ್ ಮುಹಮ್ಮದ್ ಸಾದುಲ್ಲಾ ಅವರು "ಹೆಚ್ಚು ಆಹಾರ ಬೆಳೆಯಿರಿ" ಎಂಬ ಯೋಜನೆಯ ನೆಪದಲ್ಲಿ ಪೂರ್ವ ಬಂಗಾಳದಿಂದ ದೊಡ್ಡ ಮಟ್ಟದಲ್ಲಿ ಮುಸ್ಲಿಮರನ್ನು ಕರೆತಂದು ಕೃಷಿ ಭೂಮಿ ಹಂಚಿಕೆ ಮಾಡಿದರು. ಈ ಜನಸಂಖ್ಯಾ ಬದಲಾವಣೆಯ ಪರಿಣಾಮವಾಗಿಯೇ ಭಾರತದ ವಿಭಜನೆಯ ಸಮಯದಲ್ಲಿ ಅಸ್ಸಾಂನ ಸಿಲ್ಹೆಟ್ ಜಿಲ್ಲೆ ಪೂರ್ವ ಪಾಕಿಸ್ತಾನಕ್ಕೆ (ಇಂದಿನ ಬಾಂಗ್ಲಾದೇಶ) ಸೇರಬೇಕಾಯಿತು. ಅಸ್ಸಾಂನ ಮೂಲ ಸಂಸ್ಕೃತಿಯನ್ನು ರಕ್ಷಿಸುವ ಇದೇ ಅಕ್ರಮ ವಲಸೆಯ ವಿಷಯವನ್ನು ಮುಂದಿಟ್ಟುಕೊಂಡು ಹೋರಾಡಿದ ಹಿಮಂತ ಬಿಸ್ವ ಶರ್ಮಾ ಅವರಿಗೆ ಸಿಕ್ಕ ಜನಬೆಂಬಲವೇ ಇಂದು ಅವರು ಅಸ್ಸಾಂನ ಶಕ್ತಿಯುತ ಮುಖ್ಯಮಂತ್ರಿಯಾಗಲು ಕಾರಣವಾಯಿತು.

ಮತ್ತೊಂದೆಡೆ, ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ 'SIR' ಪ್ರಕ್ರಿಯೆಯಲ್ಲಿ ಬರೋಬ್ಬರಿ 91 ಲಕ್ಷ ನಕಲಿ ಅಥವಾ ಅಕ್ರಮ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಇದರಲ್ಲಿ ಸಿಂಹಪಾಲು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರದೇ ಆಗಿತ್ತು. ಮತದಾರರ ಗುರುತನ ಪತ್ರ, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಮಾಡಿ ಕೊಡುವ ಒಂದು ವ್ಯವಸ್ತಿತ ಜಾಲವೇ ಇದ್ದು ನುಸುಳುಕೋರರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುವವರಿದ್ದಾರೆ. ಇದೇ ಕಾರಣಕ್ಕೆ ಅಲ್ಲಿ "ಹುಡುಕಿ (Detect), ಪಟ್ಟಿಯಿಂದ ತೆಗೆಯಿರಿ (Delete) ಮತ್ತು ಓಡಿಸಿ (Deport)" ಎಂಬ ಸ್ಪಷ್ಟ ನೀತಿಯೊಂದಿಗೆ ಹೊಸ ರಾಜಕೀಯ ಜಾಗೃತಿ ಮೂಡಿದೆ. ಗಡಿ ಭದ್ರತೆಯ ವಿಷಯದಲ್ಲಿ ಕಠಿಣ ನಿಲುವುಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟಾಗಿಯೂ ಅಕ್ರಮ ವಲಸಿಗರು ದಕ್ಷಿಣ ಭಾರತದತ್ತ ಮುಖ ಮಾಡಿರುವುದು ವಿಪರ್ಯಾಸವೇ ಸರಿ. 


1991ರ ಕೊಲ್ಕತ್ತಾ ಘಟನೆ ಮತ್ತು ಆರ್‌ಎಸ್‌ಎಸ್ ನಿಲುವು

ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಪಶ್ಚಿಮ ಬಂಗಾಳವು ಅಕ್ರಮ ವಲಸಿಗರ ಸುರಕ್ಷಿತ ತಂಗುದಾಣವಾಗಿ ಮಾರ್ಪಟ್ಟಿದ್ದು ವಿಪರ್ಯಾಸ. ಈ ನುಸುಳುಕೋರರ ಧಾಷ್ಟ್ರ್ಯ ಎಷ್ಟರಮಟ್ಟಿಗೆ ಬೆಳೆಯಿತೆಂದರೆ, 1991ರಲ್ಲಿ ಕಮ್ಯುನಿಸ್ಟ್ ಆಡಳಿತವಿದ್ದಾಗ ಕೊಲ್ಕತ್ತಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಲಸಿಗರ ಗುಂಪೊಂದು, "ನಮಗೆ ಭಾರತದಲ್ಲಿ ವೋಟ್ ಮಾಡುವ ಹಕ್ಕನ್ನು ಕೊಟ್ಟು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ, ಆದ್ದರಿಂದ ನಮಗೆ ಭಾರತದ ಪೌರತ್ವವನ್ನೂ ನೀಡಬೇಕು" ಎಂದು ಬಹಿರಂಗವಾಗಿ ಆಗ್ರಹಿಸಿತ್ತು. ಸಾರ್ವಭೌಮ ದೇಶವೊಂದರೊಳಗೆ ಅಕ್ರಮವಾಗಿ ನುಗ್ಗಿದ ಜನಾಂಗವೊಂದು ಇಷ್ಟೊಂದು ಧೈರ್ಯ ಪ್ರದರ್ಶಿಸಿದ್ದು ದೇಶದ ಆಂತರಿಕ ಭದ್ರತೆಗೆ ಎದುರಾದ ನೇರ ಸವಾಲಾಗಿತ್ತು.

ಈ ಆಘಾತಕಾರಿ ಘಟನೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಯಾವುದೇ ರಾಜಕೀಯ ಮುಲಾಜಿಲ್ಲದೆ ಕಠಿಣ ನಿಲುವನ್ನು ತಳೆದು ದೇಶಾದ್ಯಂತ ಜಾಗೃತಿ ಮೂಡಿಸಿತು. ಸಂಘವು ಅಂದಿನಿಂದಲೇ ಸಮಾಜದ ಮುಂದೆ ಸ್ಪಷ್ಟ ಸೈದ್ಧಾಂತಿಕ ವಿಭಜನೆಯನ್ನು ಇಟ್ಟಿತು:

'ನಿರಾಶ್ರಿತರು' (Refugees): ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಪ್ರಾಣ ಉಳಿಸಿಕೊಳ್ಳಲು ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು ಮತ್ತು ಬೌದ್ಧರನ್ನು 'ನಿರಾಶ್ರಿತರು' ಎಂದು ಪರಿಗಣಿಸಿ ಅವರಿಗೆ ಆಶ್ರಯ ನೀಡಬೇಕು.

'ನುಸುಳುಕೋರರು' (Infiltrators): ಕೇವಲ ಆರ್ಥಿಕ ಲಾಭ ಹಾಗೂ ದೇಶದ ಜನಸಂಖ್ಯಾ ಸ್ವರೂಪವನ್ನು ಬದಲಿಸುವ ರಾಜಕೀಯ ಉದ್ದೇಶದಿಂದ ಅಕ್ರಮವಾಗಿ ಬಂದವರನ್ನು 'ನುಸುಳುಕೋರರು' ಎಂದು ಕರೆದು ದೇಶದಿಂದ ಹೊರಹಾಕಬೇಕು.


*ಉಪಸಂಹಾರ:* ಕರ್ನಾಟಕಕ್ಕೆ ಎಚ್ಚರಿಕೆಯ ಗಂಟೆ

ಅಂದು 1991ರಲ್ಲಿ ಕೊಲ್ಕತ್ತಾದಲ್ಲಿ ಪೌರತ್ವ ಕೇಳುವ ಧಾಷ್ಟ್ರ್ಯ ತೋರಿದ್ದ ನುಸುಳುಕೋರರ ಜಾಲ, ಇಂದು ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರಿನವರೆಗೂ ಅಲ್ಲದೆ ದಕ್ಷಿಣ ಭಾರತದಾದ್ಯಂತ ವೋಟ್ ಬ್ಯಾಂಕ್ ಮತ್ತು ಅಗ್ಗದ ಕೂಲಿ ಕಾರ್ಮಿಕರ ರೂಪದಲ್ಲಿ ಹರಡಿಕೊಂಡಿರುವುದು ಆಂತರಿಕ ಭದ್ರತೆಯ ಎಚ್ಚರಿಕೆಯ ಗಂಟೆಯಾಗಿದೆ.  ಅಂದು ಆರ್‌ಎಸ್‌ಎಸ್ ವ್ಯಕ್ತಪಡಿಸಿದ್ದ ಆತಂಕಗಳು ಇಂದು ನಕಲಿ ಆಧಾರ್ ಮತ್ತು ವೋಟರ್ ಐಡಿಗಳ ರೂಪದಲ್ಲಿ ಸತ್ಯವಾಗುತ್ತಿವೆ.

'SIR' ನಂತಹ ತೀವ್ರ ಪರಿಷ್ಕರಣೆಗಳು ಜಾರಿಯಾಗುವಾಗ ಬಡ ಭಾರತೀಯ ನಾಗರಿಕರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಬೇಕಾದ್ದು ಎಷ್ಟು ಮುಖ್ಯವೋ, ಅದೇ ಹೊತ್ತಿನಲ್ಲಿ ಅಕ್ರಮವಾಗಿ ನುಸುಳಿದ ವಿದೇಶಿಗರನ್ನು ಗುರುತಿಸಿ ದೇಶದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದು ಅಷ್ಟೇ ತುರ್ತು ಅಗತ್ಯವಾಗಿದೆ. ಇಲ್ಲದಿದ್ದರೆ ಅಸ್ಸಾಂ, ಬೆಂಗಾಳಕ್ಕೆ ತಗುಲಿದ ಕಾಯಿಲೆ ಕರ್ನಾಟಕಕ್ಕೂ ಹರಡಲು ಬಹಳ ದಿನ ಬೇಕಾಗಿಲ್ಲ.

- ಕಿರಣ್.ಬಿ.




Wednesday, May 27, 2026

ಜೋಸೆಫ್ ವಿಜಯ್ ಯಶಸ್ಸಿನ ಹಿಂದಿನ ಚದುರಂಗದಾಟ

 ಉತ್ತರ ಪ್ರಭ:

ಮೇ 28, 2026

ತಮಿಳುನಾಡು ರಾಜಕೀಯದ ಮಹಾ ಚದುರಂಗದಾಟ: ಜೋಸೆಫ್ ವಿಜಯ್ ಮತ್ತು ಪವರ್ ನೆಕ್ಸಸ್‌ನ ಚುನಾವಣಾ ವಿಜಯದ ಕಥೆ

ಹೊರಗಿನಿಂದ ನೋಡುವ ಸಾಮಾನ್ಯ ಜನರಿಗೆ ಕೇವಲ ಒಬ್ಬ ಸಿನಿಮಾ ನಟ ಬಂದು ರಾಜಕೀಯ ಪಕ್ಷ ಕಟ್ಟಿ ಅಧಿಕಾರ ಹಿಡಿದರು ಎನಿಸಬಹುದು. ಆದರೆ, ಇದರ ಆಳಕ್ಕೆ ಇಳಿದರೆ ಅಲ್ಲಿ ಹಣ, ತಂತ್ರಗಾರಿಕೆ, ಧರ್ಮ ಮತ್ತು ಸಿನಿಮಾ ರಂಗದ ಶಕ್ತಿಶಾಲಿ ತ್ರಿಕೋನ ಕೂಟ ನಮಗೆ ಎದ್ದು ಕಾಣುತ್ತದೆ. ಆ ಕೂಟದ ಮೂರು ಮುಖ್ಯ ಕೊಂಡಿಗಳೇ — ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್, ಅವರ ಅಳಿಯ ಆದವ್ ಅರ್ಜುನ್ ಮತ್ತು ದಳಪತಿ ಜೋಸೆಫ್ ವಿಜಯ್. 

ಒಂದು ಹೊಸ ರಾಜಕೀಯ ಶಕ್ತಿ ಉದಯಿಸಬೇಕಾದರೆ ಅದಕ್ಕೆ ಮೂರು ಮುಖ್ಯ ಅಂಶಗಳು ಬೇಕು: ಹಣ (Money), ತಂತ್ರಗಾರಿಕೆ (Strategy) ಮತ್ತು ಜನಪ್ರಿಯತೆ (Popularity). ಈ ಮೂರು ಅಂಶಗಳು ಆ ಮೂವರಲ್ಲಿ ಹೇಗೆ ಹಂಚಿಕೆಯಾಗಿದ್ದವು ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಮೇಲ್ನೋಟಕ್ಕೆ ತಮಿಳುನಾಡು ರಾಜಕೀಯದಲ್ಲಿ ಕೇವಲ ಸಿನೆಮಾ ವರ್ಚಸ್ಸಿನಿಂದ ಮಾತ್ರ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎನ್ನುವುದನ್ನು ಇತಿಹಾಸ ಹಲವು ಬಾರಿ ಸಾಬೀತುಪಡಿಸಿದೆ. ಆದರೆ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ನಟ ಜೋಸೆಫ್ ವಿಜಯ್ (ದಳಪತಿ ವಿಜಯ್) ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಮೊದಲನೇ ಪ್ರಯತ್ನದಲ್ಲೇ ಭಾರಿ ಬಹುಮತದೊಂದಿಗೆ ದ್ರಾವಿಡ ಭದ್ರಕೋಟೆಯನ್ನು ನಡುಗಿಸಿ ಸರ್ಕಾರ ರಚಿಸಿರುವುದರ ಹಿಂದೆ ಕೇವಲ ಒಬ್ಬ ನಟನ ಗ್ಲಾಮರ್ ಮಾತ್ರ ಇರಲಿಲ್ಲ. ಬದಲಿಗೆ, ಅದರ ಹಿಂದೆ ಸದ್ದಿಲ್ಲದೆ ಕೆಲಸ ಮಾಡಿದ್ದು ಭಾರತೀಯ ರಾಜಕೀಯ ಇತಿಹಾಸದಲ್ಲೇ ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾದ ಒಂದು "ಪವರ್ ನೆಕ್ಸಸ್" (Power Nexus - ಶಕ್ತಿಶಾಲಿ ಒಕ್ಕೂಟ). ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್, ಅವರ ಅಳಿಯ ಆದವ್ ಅರ್ಜುನ್, ಧಾರ್ಮಿಕ ಸಂಸ್ಥೆಗಳು, ವಿದೇಶಿ NGOಗಳು ಮತ್ತು ಸಿನಿಮಾ ರಂಗದ ಪ್ರಭಾವಿ ಜಾಲ ಒಟ್ಟಾಗಿ ಸೇರಿ ಈ ಐತಿಹಾಸಿಕ ಚುನಾವಣಾ ವಿಜಯವನ್ನು ಹೇಗೆ ಸೃಷ್ಟಿಸಿದವು ಎಂಬ ವಿಸ್ತಾರವಾದ ವಿಶ್ಲೇಷಣೆ ಇಲ್ಲಿದೆ.

1. *ನೆಕ್ಸಸ್‌ನ ಅಸಲಿ ಆರ್ಥಿಕ ಇಂಧನ: ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್*

ಯಾವುದೇ ಹೊಸ ರಾಜಕೀಯ ಪಕ್ಷವು ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ DMK ಮತ್ತು AIADMK ಅನ್ನು ಎದುರಿಸಬೇಕಾದರೆ ಅದಕ್ಕೆ ನೂರಾರು ಕೋಟಿ ರೂಪಾಯಿಗಳ ಭಾರಿ ಆರ್ಥಿಕ ಇಂಧನದ ಅಗತ್ಯ ಇದ್ದೇ ಇರುತ್ತದೆ. ವಿಜಯ್ ಅವರ ಪಕ್ಷಕ್ಕೆ ಆ ಬೆನ್ನಿಲುಬಾಗಿ ನಿಂತಿದ್ದು ಲಾಟರಿ ಸಾಮ್ರಾಜ್ಯದ ಮಾಲೀಕ ಸ್ಯಾಂಟಿಯಾಗೊ ಮಾರ್ಟಿನ್. ಭಾರತದಲ್ಲೇ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಇವರು, ಇಡಿ (ED) ಮತ್ತು ಸಿಬಿಐ (CBI) ನಂತಹ ಕೇಂದ್ರ ತನಿಖಾ ಸಂಸ್ಥೆಗಳ ದಾಳಿಯಿಂದ ಭವಿಷ್ಯದಲ್ಲಿ ರಕ್ಷಣೆ ಪಡೆಯಲು ಮತ್ತು ತಮಿಳುನಾಡಿನ ಆಡಳಿತದಲ್ಲಿ ಪ್ರಭಾವ ಉಳಿಸಿಕೊಳ್ಳಲು ನಟ ವಿಜಯ್ ಅವರ ಪಕ್ಷವನ್ನು ಒಂದು ದೊಡ್ಡ "ರಕ್ಷಣಾ ಕವಚ"ವಾಗಿ ಬಳಸಿಕೊಂಡರು. ಮಾರ್ಟಿನ್ ಅವರ ಜಾಗತಿಕ ಉದ್ಯಮ ಹಾಗೂ ಆಫ್ರಿಕಾ ಖಂಡದ ಲೈಬೀರಿಯಾ ದೇಶದ "ಗೌರವಾನ್ವಿತ ರಾಯಭಾರಿ" (Consul General) ಆಗಿದ್ದ ರಾಜತಾಂತ್ರಿಕ ಪ್ರಭಾವವೂ ಈ ಒಕ್ಕೂಟಕ್ಕೆ ಪರೋಕ್ಷವಾಗಿ ಭಾರಿ ತೂಕವನ್ನು ತಂದುಕೊಟ್ಟಿತು. ಇವರ ಸಂಪರ್ಕ ಎಷ್ಟು ಬಲಿಷ್ಟವೆಂದರೆ ಅವರ ವಿವಾಹ ವಾರ್ಷಿಕೋತ್ಸವದ ಬೆಳ್ಳಿ ಮಹೋತ್ಸವದ ಸಂಧರ್ಭದಲ್ಲಿ ಶ್ರೀ ಸ್ಯಾಂಟಿಯಾಗೊ ಮಾರ್ಟಿನ್ ಮತ್ತು ಅವರ ಕುಟುಂಬವು ಪೋಪ್ ಬೆನೆಡಿಕ್ಟ್ XVI ಅವರ ವೈಯಕ್ತಿಕ ಆಶೀರ್ವಾದವನ್ನು ಪಡೆದರು.

2. *ಚುನಾವಣಾ ಮಾಸ್ಟರ್‌ಮೈಂಡ್: ಸಚಿವ ಆದವ್ ಅರ್ಜುನ್*

ಈ ಇಡೀ ಒಕ್ಕೂಟದ ನಿಜವಾದ ಸೂತ್ರಧಾರ ಅಥವಾ 'ಕಿಂಗ್ ಮೇಕರ್' ಸ್ಯಾಂಟಿಯಾಗೊ ಮಾರ್ಟಿನ್ ಅವರ ಅಳಿಯ ಆದವ್ ಅರ್ಜುನ್. ಇವರು ಮಾವನ ಅಪಾರ ಹಣದ ಬಲ ಮತ್ತು ನಟ ವಿಜಯ್ ಅವರ ಸಿನಿಮಾ ಜನಪ್ರಿಯತೆಯನ್ನು ಅತ್ಯಂತ ಚಾಣಾಕ್ಷತನದಿಂದ ಬೆಸೆದ ಕೊಂಡಿ. ಈ ಹಿಂದೆ DMK ಗೆ ಐ-ಪ್ಯಾಕ್ (I-PAC) ಸಂಸ್ಥೆಯನ್ನು ಪರಿಚಯಿಸಿದ್ದ ರಾಜಕೀಯ ತಂತ್ರಜ್ಞರಾದ ಆದವ್, ವಿಜಯ್ ಅವರ TVK ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ತಳಮಟ್ಟದಲ್ಲಿ ಚದುರಂಗದಾಟ ಆಡಿದರು. ಇತ್ತೀಚಿನ ಚುನಾವಣೆಯಲ್ಲಿ ವಿಲ್ಲಿವಾಕ್ಕಂ ಕ್ಷೇತ್ರದಿಂದ ಗೆದ್ದು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಇವರು, ವಿಜಯ್ ಸರ್ಕಾರದ ಪ್ರಮುಖ ನಿರ್ಧಾರಗಳನ್ನು ನಿಯಂತ್ರಿಸುವ "ಶ್ಯಾಡೋ ಮಾಸ್ಟರ್" ಆಗಿ ಹೊರಹೊಮ್ಮಿದ್ದಾರೆ.

3. *ತಳಮಟ್ಟದ ಸೈನಿಕ ಪಡೆ:* 'ವಿಜಯ್ ಮಕ್ಕಳ ಇಯಕ್ಕಂ' (VMI) ಮತ್ತು ಸ್ಥಳೀಯ ಚುನಾವಣೆ

ನಟ ವಿಜಯ್ ಅವರು ನೇರವಾಗಿ ವಿಧಾನಸಭಾ ಚುನಾವಣೆಗೆ ಧುಮುಕುವ ಮುನ್ನವೇ ತಮ್ಮ ಶಕ್ತಿಯನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸಿದ್ದರು. 2009 ರಲ್ಲೇ ತಮ್ಮ 85,000ಕ್ಕೂ ಹೆಚ್ಚು ಅಭಿಮಾನಿ ಸಂಘಗಳನ್ನು ಒಟ್ಟುಗೂಡಿಸಿ "ವಿಜಯ್ ಮಕ್ಕಳ ಇಯಕ್ಕಂ" (VMI) ಎಂಬ ಸಾಮಾಜಿಕ ಸಂಸ್ಥೆಯನ್ನು ಕಟ್ಟಿ, ಉಚಿತ ಊಟ, ರಕ್ತದಾನ ಮತ್ತು ಬಡ ವಿದ್ಯಾರ್ಥಿಗಳಿಗೆ ಧನಸಹಾಯದ ಮೂಲಕ ಜನರ ಮನಸ್ಸು ಗೆದ್ದಿದ್ದರು. ಇದರ ಶಕ್ತಿಯನ್ನು ಪರೀಕ್ಷಿಸಲು 2021ರ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಮೊದಲ ಪ್ರಯತ್ನದಲ್ಲೇ 115ಕ್ಕೂ ಹೆಚ್ಚು ವಾರ್ಡ್ ಸದಸ್ಯ ಸ್ಥಾನಗಳನ್ನು ಗೆದ್ದುಕೊಂಡರು. ಈ ಗ್ರಾಮೀಣ ಮಟ್ಟದ ಗೆಲುವೇ 2026ರ ವಿಧಾನಸಭಾ ಚುನಾವಣೆಯಲ್ಲಿ TVK ಪಕ್ಷಕ್ಕೆ ಭದ್ರವಾದ ಕಾರ್ಯಕರ್ತರ ಸೈನ್ಯ ಮತ್ತು ಮತದಾರರ ನಂಬಿಕೆಯನ್ನು ಒದಗಿಸಿತು.

4. *ಚರ್ಚ್ ನೆಟ್‌ವರ್ಕ್ ಮತ್ತು ವಿದೇಶಿ NGOಗಳ ರಹಸ್ಯ ಧನಸಹಾಯ*

ತಮಿಳುನಾಡು ರಾಜಕೀಯದಲ್ಲಿ ಅಲ್ಪಸಂಖ್ಯಾತ ಮತಗಳು ಅತ್ಯಂತ ನಿರ್ಣಾಯಕ. ಹುಟ್ಟಿನಿಂದ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಆಗಿರುವ ಜೋಸೆಫ್ ವಿಜಯ್ ಅವರಿಗೆ ಸಾಂಸ್ಥಿಕ ಧಾರ್ಮಿಕ ಬೆಂಬಲ ಸಿಗುವಂತೆ ಮಾಡಿದ್ದು ಸ್ಯಾಂಟಿಯಾಗೊ ಮಾರ್ಟಿನ್ ಅವರ ಪತ್ನಿ ಡಾ. ಲೀಮಾ ರೋಸ್ ಮಾರ್ಟಿನ್. 'ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್' ನ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ಇವರ ಬಿಷಪ್‌ಗಳು ಮತ್ತು ಚರ್ಚ್‌ಗಳ ಮೇಲಿನ ಹಿಡಿತ ಹಾಗೂ ವ್ಯಾಟಿಕನ್ (ಪೋಪ್) ನಂಟು ಅತ್ಯಂತ ಪ್ರಮುಖ ಪಾತ್ರ ವಹಿಸಿತು.

ಚುನಾವಣಾ ಸಮಯದಲ್ಲಿ ಚರ್ಚ್‌ಗಳ ಭಾನುವಾರದ ಪ್ರಾರ್ಥನೆಗಳ (Sunday Sermons) ಮೂಲಕ ಅಲ್ಪಸಂಖ್ಯಾತ ಮತಗಳನ್ನು DMK ಕೈತಪ್ಪಿಸಿ ವಿಜಯ್ ಅವರ ಪಕ್ಷಕ್ಕೆ ಒಟ್ಟಾಗಿ ಬೀಳುವಂತೆ ಧ್ರುವೀಕರಣಗೊಳಿಸಲಾಯಿತು. ಅಷ್ಟೇ ಅಲ್ಲದೆ, ಅಮೆರಿಕಾದ 'ಕಂಪ್ಯಾಷನ್ ಇಂಟರ್ನ್ಯಾಷನಲ್' ನಂತಹ ಸಂಸ್ಥೆಗಳಿಂದ ಸ್ಥಳೀಯ ಕ್ರಿಶ್ಚಿಯನ್ NGOಗಳಿಗೆ ಬರುವ ವಿದೇಶಿ ದೇಣಿಗೆಗಳು ತಳಮಟ್ಟದಲ್ಲಿ ಸಮುದಾಯವನ್ನು ಸಂಘಟಿಸಲು ಮತ್ತು ಮತದಾರರನ್ನು ಸೆಳೆಯಲು ಪರೋಕ್ಷವಾಗಿ ಬಳಕೆಯಾದವು ಎಂಬ ಬಲವಾದ ವಿಶ್ಲೇಷಣೆಗಳಿವೆ.

5. *ಸಾಮಾಜಿಕ ಸಮೀಕರಣ: VCK ಮತ್ತು ದಲಿತ ಮತಗಳ ವರ್ಗಾವಣೆ*

ವಿಜಯ್ ಅವರಿಗೆ ಕೇವಲ ಸಿನಿಮಾ ಅಭಿಮಾನಿಗಳು ಅಥವಾ ಕ್ರಿಶ್ಚಿಯನ್ ಮತಗಳು ಮಾತ್ರ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಆದವ್ ಅರ್ಜುನ್ ಅವರು ತಾವು ಈ ಹಿಂದೆ ಪ್ರಬಲ ದಲಿತ ಸಂಘಟನೆಯಾದ VCK (ತೋಳ್ ತಿರುಮಾವಳವನ್ ಅವರ ಪಕ್ಷ) ದಲ್ಲಿದ್ದ ತಮ್ಮ ಹಳೆಯ ಪ್ರಭಾವ ಮತ್ತು ಮಾರ್ಟಿನ್ ಫೌಂಡೇಶನ್‌ನ ಧನಸಹಾಯದ ಲಿಂಕ್ ಅನ್ನು ಬಳಸಿಕೊಂಡರು. ತಮಿಳುನಾಡಿನ ಉತ್ತರ ಮತ್ತು ಮಧ್ಯ ಜಿಲ್ಲೆಗಳಲ್ಲಿದ್ದ ತಳಮಟ್ಟದ ದಲಿತ ಮತ್ತು ಶ್ರಮಿಕ ವರ್ಗದ ದೊಡ್ಡ ಮತಬ್ಯಾಂಕ್ ಅನ್ನು ಸದ್ದಿಲ್ಲದೆ ವಿಜಯ್ ಅವರ TVK ಪಕ್ಷದ ಕಡೆಗೆ ತಿರುಗಿಸುವಲ್ಲಿ ಆದವ್ ಅವರ ಸಾಮಾಜಿಕ ತಂತ್ರಗಾರಿಕೆ ಯಶಸ್ವಿಯಾಯಿತು.

6. *ಕಾಲಿವುಡ್ ಸಿನಿಮಾ ಫೈನಾನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಸವಾಲು:*

ಚಿತ್ರರಂಗದಲ್ಲಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ 'ರೆಡ್ ಜೈಂಟ್ ಮೂವೀಸ್' ಹೊಂದಿದ್ದ ಏಕಸ್ವಾಮ್ಯ ಹಾಗೂ ಚಿತ್ರಗಳ ಬಿಡುಗಡೆಗೆ ಥಿಯೇಟರ್‌ಗಳ ಮೇಲಿದ್ದ ಒತ್ತಡವು ಕೂಡ ವಿಜಯ್ ಅವರನ್ನು ಸಿನಿಮಾ ಬಿಟ್ಟು ರಾಜಕೀಯಕ್ಕೆ ಬರಲು ಪ್ರೇರೇಪಿಸಿತು. ಲಾಟರಿ ದಂಧೆಯಿಂದ ಬರುವ ನಗದು ಹಣವನ್ನು ಕಾಲಿವುಡ್‌ನ ಪ್ರಮುಖ ಪ್ರೊಡಕ್ಷನ್ ಮತ್ತು ಡಿಸ್ಟ್ರಿಬ್ಯೂಷನ್ ಹೌಸ್‌ಗಳ ಮೂಲಕ ವಿಜಯ್ ಅವರ ಬಿಗ್ ಬಜೆಟ್ ಸಿನಿಮಾಗಳಲ್ಲಿ ಪರೋಕ್ಷವಾಗಿ ಹೂಡಿಕೆ ಮಾಡುವ ವ್ಯವಸ್ಥಿತ ಜಾಲವಿತ್ತು. ಇದೇ ಜಾಲವು ಚುನಾವಣಾ ಸಮಯದಲ್ಲಿ ಹಳ್ಳಿ ಹಳ್ಳಿಗಳಲ್ಲೂ ಭಾರಿ ಪ್ರಮಾಣದ ಡಿಜಿಟಲ್ ಪ್ರಚಾರ ಮತ್ತು ಹೈಟೆಕ್ ಸಮಾವೇಶಗಳನ್ನು ಆಯೋಜಿಸಲು ಕೋಟ್ಯಂತರ ರೂಪಾಯಿಗಳ "ನಗದು ಇಂಧನ" ಒದಗಿಸಿತು.

ಮುಕ್ತಾಯ

ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡಿನಲ್ಲಿ ಜೋಸೆಫ್ ವಿಜಯ್ ಅವರ ಈ ಐತಿಹಾಸಿಕ ಚುನಾವಣಾ ವಿಜಯವು ಕೇವಲ ರಾಜಕೀಯ ಬದಲಾವಣೆಯಲ್ಲ; ಬದಲಿಗೆ ಅದು ಮಾರ್ಟಿನ್ ಕುಟುಂಬದ ಅಪಾರ ಹಣದ ಬಲ, ವಿದೇಶಿ NGO ಹಾಗೂ ಚರ್ಚ್‌ಗಳ ಸಾಂಸ್ಥಿಕ ಮತಬ್ಯಾಂಕ್, VCK ಯ ತಳಮಟ್ಟದ ಸಾಮಾಜಿಕ ಬೆಂಬಲ, ಆದವ್ ಅರ್ಜುನ್ ಅವರ ಚುನಾವಣಾ ಸೂತ್ರಗಳು ಮತ್ತು ವಿಜಯ್ ಅವರದ್ದೇ ಆದ ಫ್ಯಾನ್ಸ್ ಕ್ಲಬ್‌ಗಳ ಭದ್ರವಾದ ಸೈನಿಕ ಪಡೆ ಒಟ್ಟಾಗಿ ಸೇರಿದಾಗ ಸೃಷ್ಟಿಯಾದ ಒಂದು "ಡೆಡ್ಲಿ ಕಾಂಬಿನೇಷನ್". ಪ್ರಜಾಪ್ರಭುತ್ವದಲ್ಲಿ ಹಣ, ಧರ್ಮ, ತಂತ್ರಗಾರಿಕೆ ಮತ್ತು ಸಿನಿಮಾ ಗ್ಲಾಮರ್ ಒಂದೇ ವೇದಿಕೆಯಲ್ಲಿ ಸೇರಿದಾಗ ಇಂತಹ ಅತ್ಯಂತ ಶಕ್ತಿಶಾಲಿ ಮತ್ತು ವಿವಾದಾತ್ಮಕ ರಾಜಕೀಯ ಕ್ರಾಂತಿಗಳು ಸೃಷ್ಟಿಯಾಗುತ್ತವೆ ಎಂಬುದಕ್ಕೆ ಈ "ಪವರ್ ನೆಕ್ಸಸ್" ಒಂದು ಜ್ವಲಂತ ಉದಾಹರಣೆಯಾಗಿದೆ.

- ಕಿರಣ್. ಬಿ.




Saturday, March 15, 2025

ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕೆಡಿಸುವ ಬೀಡುಗಳು...

15, ಮಾರ್ಚ್ 2025

ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕದಡುವ ಬೀಡುಗಳ ಅಥವಾ ಶ್ರೇಷ್ಟತೆಯ ವ್ಯಸನಿಗಳ ಮನೋ ವಿಕಾರ ಅನಾವರಣಗೊಳಿಸುವ ಸಾಧನಗಳ ಅನ್ನುವುದನ್ನ ವಿಮರ್ಶಿಸಲೆ ಬೇಕಾದ ಸಂಧರ್ಭಗಳು ಆಗಾಗ್ಗೆ ಬಂದೊದಗುತ್ತಲೇ ಇರುತ್ತವೆ. ಇಂತಹ ಸಂದರ್ಭವೊಂದು ಕ್ಲಬ್ ಹೌಸ್ ಅನ್ನ್ಜುವ ಮಾತಾಡುವ ಜಾಲತಾಣದಲ್ಲಿ ಬಂದಿದ್ದು, ಸಂಪ್ರದಾಯವಾದಿಗಳು ತಮ್ಮ ಸಂಪ್ರದಾಯವೇ ಶ್ರೇಷ್ಠ ಉಳಿದದ್ದು ಕನಿಷ್ಠ ಅನ್ನುವ ಭಾವನೆಯನ್ನ ಬಹಿರಂಗವಾಗಿ ವ್ಯಕ್ತ ಪಡಿಸಿದ್ದನ್ನ ಇಂದು ಅವಲೋಕಿಸೋಣ. ತಮ್ಮ ಸಂಪ್ರದಾಯ ಶ್ರೇಷ್ಠ ಎನ್ನುವುದು ಸರಿಯೇ, ಆದರೆ ಅದನ್ನ ಸಾಬೀತುಮಾಡಲು ಬೇರೊಂದು ಸಂಪ್ರದಾಯವನ್ನು ಉದ್ದೇಶ ಪೂರಿತವಾಗಿ ಅವಹೇಳನ ಮಾಡುವುದು ಅಕ್ಷಮ್ಯವಷ್ಟೆ ಅಲ್ಲದೆ ಕಾನೂನಿನ ರೀತ್ಯ ಶಿಕ್ಷಾರ್ಹ ಅಪರಾಧವಾಗಿದೆ.

"ಕಲ್ಯಾಣದ ಮಂತ್ರಿ ಬಸವಣ್ಣ ಮತ್ತು ಬಾಲ ಸನ್ಯಾಸಿ ಶಂಕರಾಚಾರ್ಯರು" ಎಂಬ ಶೀರ್ಷಿಕೆಯಡಿ ಒಂದು ಚರ್ಚಾ ಕಾರ್ಯಕ್ರಮ ಆಯೋಜಿಸಿ ಅದರಲ್ಲಿ ಬಸವಣ್ಣನವರಿಗೆ ಉದ್ದೇಶಪೂರಿತವಾಗಿ ಅವಹೇಳನ ಮಾಡುವ ಹುನ್ನಾರ ನಡೆಸಿದ್ದು ಈ ಕೆಳಗಿನಂತಿದೆ.

1. ತಾವು ದ್ವೇಷಿಸುವ ಬಸವಣ್ಣನವರಿಗೆ ಬಸವಣ್ಣ  ಎಂದು ಏಕವಚನ ಸಂಭೋಧನೆ ಮಾಡಿದ್ದರೆ ತಮ್ಮ ಪ್ರೀತಿಪಾತ್ರರಿಗೆ  ಶಂಕರಾಚಾರ್ಯರರು ಎಂದು ಗೌರವಯುತವಾದ ಸಂಭೋದನೆ.


2. ಬಸವಣ್ಣನವರು ಯಾವುದೇ ತತ್ವ ಜ್ಞಾನಿಯಲ್ಲ ಬದಲಿಗೆ ಅವರು ಒಂದು ಸಮೃದ್ದ ರಾಜ್ಯದ ಮಂತ್ರಿಯಾಗಿದ್ದರು, ಆದರೆ ಶಂಕರಾಚಾರ್ಯರು ಬಾಲ ಸನ್ಯಾಸಿ ಆಗಿದ್ದು ಅದ್ವೈತ ಸಿದ್ದಾಂತದ ಪ್ರತಿಪಾದಕರಾಗಿದ್ದರು ಎಂದು ಪ್ರತಿಪಾದಿಸಲಾಗಿತ್ತು.

3. ಬಸವಣ್ಣನವರು ಸಂಸಾರಿ ಆಗಿದ್ದು ಸಕಲ ಭೋಗಗಳನ್ನ ಅನುಭವಿಸಿದವರು, ಆದರೆ ಶಂಕರಾಚಾರ್ಯರು ಬಾಲ ಸನ್ಯಾಸಿಯಾಗಿ ಅವರ ಜೀವಿತದ ಕೇವಲ 32  ವರ್ಷಗಳಲ್ಲಿ ಇಡೀ ಭಾರತ ಸುತ್ತಿ ಧರ್ಮವನ್ನು ಮರು ಸ್ಥಾಪಿಸಿದವರು. ಇವರು ಪ್ರತಿಪಾದಿಸುತ್ತಿರುವುದು ಯಾವ ಧರ್ಮ ಎಂದು ಇವರಿಗೆ ಸ್ಪಷ್ಟತೆ ಇದ್ದಂತಿದೆ, ಅದು ಖಂಡಿತ ಹಿಂದೂ ಧರ್ಮವಾಗಿರಲು ಸಾಧ್ಯವಿಲ್ಲ. ಇದನ್ನ ಈ ಕಾರ್ಯಕ್ರಮ ರೂಪಿಸಿದ ಅರಸೀಕೆರೆ ತಾಲೂಕು ಮೂಲದ ಅಶ್ವಿನಿ ಎಂಬ ಯುವತಿ ಎಲ್ಲ ವೇಧಿಕೆಗಳಲ್ಲಿ ಹೇಳುತ್ತಲೇ ಬಂದಿದ್ದಾಳೆ.

4. ಇನ್ನೊಂದು ಗಹನವಾದ ವಿಚಾರ ಚರ್ಚಿಸಿದ್ದು ಅಂದರೆ, ಇಬ್ಬರು ಗುರುಗಳಲ್ಲಿ ಒಬ್ಬರು ಸಮಾನತೆ ಮೆರೆದರೆ ಇನ್ನೊಬ್ಬರು ಅಸಮಾನತೆ ಸಾರಿದವರೆಂದು. ಈ ವಿಷಯವನ್ನ ಪ್ರಸ್ತುತ ಪಡಿಸಲು ಬಸವಣ್ಣನವರ ಹಲವು ವಚನಗಳನ್ನ ಉಲ್ಲೇಖಿಸಿ ಇವರು ಹರಿ ಮತ್ತು ಹರರಲ್ಲಿ ಬೇದ ಮಾಡಿದ್ದಾರೆ, ದೇವರಲ್ಲಿ ಅಸಮಾನತೆ ಮತ್ತು ವೈರತ್ವ ಸಾರಿದ್ದಾರೆಂದು, ಮತ್ತು ಶಂಕರಾಚಾರ್ಯರು ಹರಿ ಮತ್ತು ಹರರಲ್ಲಿ ಬೇದ ಬಾವ ಅಳಿಸಿ ಹಾಕಿ ಎಲ್ಲರಿಗೂ ಎಲ್ಲ ದೇವರನ್ನು ಸಮಾನವಾಗಿ ಪೂಜಿಸುವ ಅವಕಾಶ ಮಾಡಿಕೊಟ್ಟಿದ್ದಾರೆಂದು ಪ್ರತಿಪಾದಿಸಲಾಯಿತು.

ಇಲ್ಲಿ, ಬಸವಣ್ಣನವರು ಶಿವ ಪಂತಕ್ಕೆ ಬಂದವರು ತಮ್ಮ ಹಳೆಯ ಸಂಪ್ರದಾಯದ ಪೂಜೆ ಹೋಮ ಹವನಗಳಲ್ಲಿ ತಮ್ಮ ಸಮಯ ವ್ಯರ್ಥ ಮಾಡದೆ ಕಾಯಕದಲ್ಲಿ ತೊಡಗಲೆಂದು ಮತ್ತು ಏಕದೇವೋಪಸನೆ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎನ್ನುವ ಕಾರಣಕ್ಕೆ ಹೇಳಿದ್ದಾರೆ. ಇದು ಶಿವಯೋಗ ಧ್ಯಾನ  (ಶಿವ ಪೂಜೆ ಮಾಡುವ ವಿಧಾನವೇ ಒಂದು ಧ್ಯಾನ) ದಿಂದ ಸಾಬೀತಾಗಿದೆ. ಈ ಅವಕಾಶವನ್ನ ಬಸವಣ್ಣನವರು ಶೂದ್ರರೆಂದು ಕಡೆಗಾಣಿಸಿದವರಿಗೂ ಮತ್ತು ಮಹಿಳೆಯರಿಗೂ ಮಾಡಿಕೊಟ್ಟು ಮಹಾನ್ ಮಾನವತವಾದ ಪ್ರತಿಪಾದಿಸಿದ್ದಲ್ಲದೆ, ಆಚರಣೆಗೂ ತಂದರು. ಆದರೆ ಶಂಕರಾಚಾರ್ಯರು, ಬ್ರಹ್ಮಸೂತ್ರದಲ್ಲಿರುವ ಶೂದ್ರ ಮತ್ತು ಮಹಿಳೆಯರಿಗೆ ವೇದಾಧ್ಯಯನದ ಹಕ್ಕಿಲ್ಲ ಎಂಬ ಈ ಘೋರ ಅಸಮಾನತೆಯನ್ನ ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ವಿರೋದ ವ್ಯಕ್ತಪಡಿಸುವ ಎಡಪಂತಿಯರು ಪ್ರತಿಪಾದಿಸಿದ್ದಾರೆ. 

ಹಾಗಾದರೆ, ದೇವರಲ್ಲಿ ಸಮಾನತೆ ತಂದು ಜನರಲ್ಲಿ ಅಸಮಾನತೆ ಉಳಿಸಿಕೊಂಡ ಶಂಕರಾಚಾರ್ಯರು ಮೇಲೊ ಅಥವಾ ಅಸ್ಪೃಶರು, ಹಿಂದುಳಿದವರಿಗೆ ಸಮಾನ ಬಾಳ್ವೆಗೆ ಅವಕಾಶ ಮಾಡಿ ಕೊಟ್ಟ ಬಸವಣ್ಣನವರು ಮೇಲೊ ಅನ್ನೋ ಪ್ರಶ್ನೆ ಎತ್ತಿ ಶಂಕರಾಚಾರ್ಯರನ್ನ ನಿಂದಿಸುವ ಕೆಲಸವೂ ಇದೆ ಕ್ಲಬ್ ಹೌಸ್ ನಲ್ಲಿ ಮತ್ತೊಂದು ಕಾರ್ಯಕ್ರಮದಲ್ಲಿ ಎಡ ಚಿಂತನೆಯ ಜನರು ಮಾಡಿದ್ದಾರೆ.


ಅಷ್ಟೇ ಅಲ್ಲದೆ ಶಂಕರಾಚಾರ್ಯರು ಹೆಣ್ಣು ಮಕ್ಕಳು ನಿತ್ಯ ನಾರಕಿಯೆಂದು ಹೇಳಿದರೆ ಬಸವಣ್ಣ ತನ್ನ ಸ್ವಂತ ಅಕ್ಕಳಿಗೆ ಯಾಕೆ ಉಪನಯನದ ಹಕ್ಕಿಲ್ಲ ಎಂದು  ಪ್ರಶ್ನಿಸಿದವರು ಮತ್ತು ಮುಂದೆಯೂ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟು, ಇಡೀ ಪ್ರಪಂಚಕ್ಕೆ ಸಂಸತ್ತಿನ, ಪ್ರಜಾತಾಂತ್ರಿಕತೆಯ, ಸಮಾನತೆಯ ಮುನ್ನುಡಿ ಬರೆದವರು ವಿಶ್ವಗುರು ಬಸವಣ್ಣ.

5. ಬಸವಣ್ಣನವರು ಕಲ್ಯಾಣದ ಸಕಲ ವೈಭೋಗದ ಮಂತ್ರಿ ಎಂದವರು ತಮ್ಮ ಮನೋ ವಿಕೃತವನ್ನ ಮುಂದುವರೆಸುತ್ತಾ ಬಸವಣ್ಣನವರದ್ದೇ ಕೆಳಗಿನ ಒಂದು ವಚನ ಓದಿ, ಅವರ ಹುಟ್ಟನ್ನೇ ಪ್ರಶ್ನಿಸುತ್ತಾರೆ. 

ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು- ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು; ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ.

ಈ ವಚನವನ್ನಓದುವ ಯಾವುದೇ ಸಂದರ್ಭಇಲ್ಲದಿದ್ದರೂ ಬೇಕಂತಲೆ ಓದಿ ಬಸವಣ್ಣನವರ ಹುಟ್ಟನ್ನ ಪ್ರಶ್ನಿಸಿ ಈ ವಚನ ಪ್ರಕ್ಷಿಪ್ತ (ಸೇರಿಸಿದ್ದು) ಇರಬಹುದು ನನಗೆ ಗೊತ್ತಿಲ್ಲ ಅಂತ ನಾಟಕವನ್ನೂ ಆಡಿ ತಮ್ಮ ಮನೋ ವಿಕೃತಿ ಮೆರೆದಿದ್ದಾರೆ. ಆದರೆ ಈ ವಚನ ಪ್ರಕ್ಷಿಪ್ತವಲ್ಲ. ಬದಲಿಗೆ ಇದು ಬಸವಣ್ಣನವರೇ ಬರೆದ ವಚನ ಆಗಿದ್ದು ವಚನ ಸಾಹಿತ್ಯ ಮತ್ತು ಕಲ್ಯಾಣದ ಇತಿಹಾಸ ಅರಿತವರು ಅದರ ಸಂದರ್ಭವನ್ನ ಅರಿಯಬಲ್ಲರು. ಆದರೆ ಅವಹೇಳನ ಮಾಡಲೇ ಬೇಕು ಅಂತ ನಿರ್ದರಿಸಿ out of context ಇದನ್ನ ಉಲ್ಲೇಖಿಸಿ ಕೇಳುಗರ ಮನಸಿನಲ್ಲಿ ಗೊಂದಲ ಉಂಟು ಮಾಡುವುದಲ್ಲದೆ ಬಸವಣ್ಣನವರ ಬಗ್ಗೆ ಅಸಹ್ಯ ಹುಟ್ಟಿಸುವುದೇ  ಮೂಲ ಉದ್ದೇಶವಾಗಿತ್ತು.

ಬಸವಣ್ಣನವರ ವಚನಗಳನ್ನ ಸಮಗ್ರವಾಗಿ ಅಧ್ಯಾಯನ ಮಾಡಿದ್ದರೆ ಇದನ್ನ ಯಾವ ಸಂದರ್ಭದಲ್ಲಿ ಬರೆದಿದ್ದರು ಅನ್ನುವ ಅರಿವು ಸುಲಭವಾಗಿಯೇ ಆಗುತ್ತಿತ್ತು. ಆದರೆ ಈ ವಚನವನ್ನ ಚೆರ್ರಿ ಪಿಕ್ ಮಾಡಿದ್ದರ ಉದ್ದೇಶ ಅದನ್ನ ಅರ್ಥ ಮಾಡಿಕೊಳ್ಳುವ ಬದಲಿಗೆ ಕೇವಲ ಶಂಕರಾಚಾರ್ಯರ ಜೊತೆ ಹೋಲಿಸಿ ಬಸವಣ್ಣನವರನ್ನ ಅವಹೇಳನ ಮಾಡುವುದಾಗಿತ್ತು.

ಈ ವಚನವನ್ನ ಬಸವಣ್ಣನವರು ಯಾವ ಸಂದರ್ಭಕ್ಕೆ ಯಾಕೆ ಬರೆದಿದ್ದರು ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೊಟ್ಟಿರುವ ವ್ಯಾಖ್ಯಾಯನ ಈ ಕೆಳಗಿನಂತೆ ಸುಸ್ಪಷ್ಟವಾಗಿದೆ.

ಹುಟ್ಟಿನಿಂದ ಕೀಳು ಎಂಬುದಿಲ್ಲ: ಸಮಾಜದ ನೆಮ್ಮದಿಗೆ ಭಂಗವುಂಟುಮಾಡುವುದೆಂಬ ಕಾರಣದಿಂದಲೇ ಬಸವಣ್ಣನವರು ಉತ್ತಮ ಕುಲವೆನಿಸಿದ್ದ ತಮ್ಮ ಬ್ರಾಹ್ಮಣ ಜಾತಿಯನ್ನು ಸಂಪೂರ್ಣವಾಗಿ ತ್ಯಜಿಸಿ ಬಂದಿದ್ದರೂ ಕೆಲವರು ಮಾತ್ರ ಅವರು ಉಚ್ಚ ಕುಲದಲ್ಲಿ ಹುಟ್ಟಿದವರೆಂಬ ಭಾವನೆಯನ್ನು ಇರಿಸಿಕೊಂಡೇ ಅವರನ್ನು ಗೌರವದಿಂದ ಕಾಣುತ್ತಿದ್ದರೆಂದು ಈ ಹಿಂದೆ ನೋಡಿದೆವು. ಜಾತಿರಹಿತ ಸಮಾಜದ ನಿರ್ಮಾಣದಲ್ಲಿ ನಿರತರಾಗಿದ್ದ ಬಸವಣ್ಣನವರಿಗೆ ಹೀಗೆ ಜಾತಿಯ ಕಾರಣದಿಂದಲೇ ದೊರೆಯುವ ಗೌರವ ಆದರಗಳು ಅವರ ಭಾವನೆಯನ್ನೇ ಕೆಣಕಿ ಭಾವೋದ್ರೇಕಕ್ಕೆ ಎಡೆಮಾಡುತ್ತವೆ. ಅಂತಹ ಬಾವೋದ್ರೇಕದಲ್ಲಿ ನುಡಿದುದೇ ಪ್ರಸ್ತುತ ವಚನ. ತಮ್ಮನ್ನು ಉತ್ತಮ ಕುಲದವರೆಂದು ಜನ ತಿಳಿಯುವುದು ತಾವು ಮೊದಲು ಬ್ರಾಹ್ಮಣರಾಗಿದ್ದರೆಂಬ ಕಾರಣದಿಂದಲೇ ಅಲ್ಲವೇ ಎಂದು ‘ನಾನು ಬ್ರಾಹ್ಮಣನೇ ಅಲ್ಲ, ನಾನು ಬ್ರಾಹ್ಮಣ ವಂಶದಲ್ಲಿ ಹುಟ್ಟಿಯೇ ಇಲ್ಲ’ ಎನ್ನುತ್ತಾರೆ. ತಮ್ಮ ಹುಟ್ಟಿದ ಬಗೆಯನ್ನು ಅತ್ಯಂತ ನಿಮ್ನ ರೀತಿಯಲ್ಲಿ ಕಲ್ಪಿಸಿ ಹೇಳುತ್ತಾರೆ. ‘ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು ಇವರಿಬ್ಬರು ಹೊಲದಲ್ಲಿ ಬೆರಣಿಗೆ ಹೋಗಿ ಸಂಗವ ಮಾಡಿದರು, ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ....’ ಚೆನ್ನಯ್ಯ ಸಾಮಾನ್ಯ ಜನರ ದೃಷ್ಟಿಯಲ್ಲಿ ಮಾದಿಗ, ಅಂತೆಯೇ ಕಕ್ಕಯ್ಯ ಡೋಹಾರ. ಹೀಗಿರುವಾಗ ಅವರೀರ್ವರ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ದಾಸಿಯರು ಲೋಕದ ದೃಷ್ಟಿಯಲ್ಲಿಅದೆಷ್ಟು ನಿಮ್ನ ವರ್ಗದವರಾಗಿರಬೇಕು! ಚೆನ್ನಯ್ಯನ ಮನೆಯಲ್ಲಿರುವ ಆ ದಾಸಿಯ ಮಗನಿಗೂ ಕಕ್ಕಯ್ಯನ ಮನೆಯ ಆ ದಾಸಿ ಮಗಳಿಗೂ ನಾನು ಬಸವಣ್ಣ, ಹುಟ್ಟಿದೆನೆಂದಮೇಲೆ ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಮಾತಾದರೂ ಎಲ್ಲಿ ಅವರಾದರೂ ಮದುವೆಯಾದ ದಂಪತಿಗಳೇ? ಅದೂ ಇಲ್ಲ. ಹೊಲದಲ್ಲಿ ಇಬ್ಬರೂ ಬೆರಣಿಯನ್ನಾರಿಸಲು ಹೋಗಿದ್ದರು. ಆಗ ಪರಸ್ಪರ ಆಕರ್ಷಿತರಾಗಿ ಕೂಡಿಕೊಂಡರು. ಆ ಕಾರಣದಿಂದ ನಾನು ಹುಟ್ಟಿದೆ ಎಂದು ಬಸವಣ್ಣನವರು ಎಷ್ಟು ಸಾಧ್ಯವೋ ಅಷ್ಟು ನಿಕೃಷ್ಟವಾಗಿ ತಮ್ಮ ಜನ್ಮವನ್ನು ಕಲ್ಪಿಸಿ ಹೇಳಿದ್ದಾರೆ. ಹೀಗೆ ಮದುವೆಯಾಗದವರಿಗೆ ಹುಟ್ಟಿದ ನನ್ನನ್ನೇ ಉತ್ತಮನೆಂದು ಕರೆದು ಗೌರವಿಸುವುದಾದರೆ ನಿಜವಾದ ತಂದೆ-ತಾಯಿಗಳಿಗೆ ಹುಟ್ಟಿದ ದಾಸಯ್ಯ, ಕಕ್ಕಯ್ಯಗಳು ಅದೆಂತು ಕೀಳಾಗಬಲ್ಲರು? ಎಂಬುದೇ ಇಲ್ಲಿಯ ಇಂಗಿತಾರ್ಥ.

ಈ ವಚನವನ್ನ ಅರ್ಥ ಮಾಡಿಕೊಳ್ಳಲು ನಿಜವಾದ ಹಿಂದೂ ಮನಸ್ಸು ಬೇಕೆ ಹೊರತು ಒಬ್ಬ ಜಾತಿವಾದಿ ಅಥವಾ ಸಂಪ್ರದಾಯವಾದಿಗೆ ಇದರ ಗಾಡತೆ ನಿಲುಕಲು ಸಾಧ್ಯವಿಲ್ಲದ್ದು. ಅಸ್ಪೃಶ್ಯ ಮತ್ತು ಹಿಂದುಳಿದವರಿಗೆ ಸಮಾನತೆ ಕೊಟ್ಟಾಗ ಆ ಅವತಾರ ಪುರುಷ ವಿಶ್ವಗುರು ಬಸವಣ್ಣನವರ ಮೇಲೆ ಅಪಾರ ಗೌರವ ಹುಟ್ಟುವುದು ಸರ್ವೇ ಸಾಮಾನ್ಯ. ಆಗ ತನ್ನನ್ನು ಒಬ್ಬ ಸಾಮಾನ್ಯನಂತೆ ಕಾಣಿ ಎಂದು ಹೇಳಲು ಈ ರೀತಿ ವಚನವನ್ನ ಬರೆದಿದ್ದಾರೆ. ಆದರೆ, ಬಸವ ದ್ವೇಷಿಗಳು ಮತ್ತು ಬಸವಣ್ಣನವರ ಅವಹೇಳನದ ಉದ್ದೇಶದಿಂದಲೆ ಈ ವಚನವನ್ನ ಓದಿದ ಯುವತಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 302 ರ ಅಡಿಯಲ್ಲಿ ಶಿಕ್ಷಾರ್ಹಳು.

ಇಂದು ಈ ರೀತಿ ಬಸವಣ್ಣನವರ ಅವಹೇಳನ ಮಾಡುತ್ತಿರುವ ಸಂಪ್ರದಾಯವಾದಿಗಳೆ ಅಂದು 12 ನೇ ಶತಮಾನದಲ್ಲಿ ಶಿವ ಶರಣರ ಮಾರಣ ಹೋಮ ಮಾಡಿದ ಸಂಪ್ರದಾಯವಾದಿಗಳ ವಾರಸುದಾರರಂತೆ  ವರ್ತಿಸುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ.
 

ಇಷ್ಟೆಲ್ಲ ಆದ ಮೇಲೂ ಮತ್ತೆ ಮತ್ತೆ ಇದೆ ಸಂಪ್ರದಾಯವಾದಿ ಮನಸ್ಥಿತಿಯ ಯುವತಿ ಶಂಕರಾಚಾರ್ಯರು ಮತ್ತು ಬಸವಣ್ಣನವರ ಹೋಲಿಕೆ ಮಾಡಿ ಬಸವಣ್ಣನವರನ್ನ ಅವಹೇಳನ ಮಾಡಲು ಹೋಗಿ ಬಸವಣ್ಣ ಮತ್ತು ಶಂಕರಾಚಾರ್ಯರು ಇಬ್ಬರನ್ನೂ ಅವಹೇಳನ ಮಾಡಿಸಿದ ಅಪಕೀರ್ತಿ ಹಾಸನ ಜಿಲ್ಲೆಯವಳು ಎಂದು ಹೇಳಿ ಕೊಳ್ಳುವ ಅಶ್ವಿನಿ ಎಂಬ ಯುವತಿಗೆ ಸೇರುತ್ತದೆ.  

ಸಂಪ್ರದಾಯವಾದಿಗಳು ಕ್ಲಬ್ ಹೌಸ್ ನಲ್ಲಿ ಬಸವಣ್ಣನವರನ್ನ ಅವಹೇಳನ ಮಾಡಿದ್ದು ಇದು ಮೊದಲೂ ಅಲ್ಲ, ಬಹುಶಃ ಕೊನೆಯೂ ಅಲ್ಲ. ಹಿಂದೊಮ್ಮೆ  ಶಿವಮೊಗ್ಗದ ದಿಲೀಪ್ ನಾಡಿಗ್ ಎಂಬ ವ್ಯಕ್ತಿ ತನ್ನ ಸಂಪ್ರದಾಯ ವಿವರಿಸುವಾಗ ಪ್ರಶ್ನೆ ಒಂದಕ್ಕೆ ಉತ್ತರಿಸುವಾಗ ಜನಿವಾರ ತೆಗೆದ ಬಸವಣ್ಣ ಕೂಡ  ಚಾಂಡಾಲ ಅಂತ ಹೇಳಲು ಯಾವುದೇ ಮುಜುಗರ ಪಡಲಿಲ್ಲ, ಇಂದಿಗೂ ಆ ಮಾತಿಗೆ ಪಶ್ಚಾತ್ತಾಪ ಪಟ್ಟಿಲ್ಲ. ಬದಲಿಗೆ ಬಸವಣ್ಣನವರನ್ನು ಪದೇ ಪದೇ ಅವಹೇಳನ ಮಾಡಿದ ಅಶ್ವಿನೀ ಎಂಬ ಯುವತಿಯ ಬೆಂಬಲಕ್ಕೆ ನಿಂತಿದ್ದು ಈ ಸಂಪ್ರದಾಯವಾದಿಗಳ ಮನಸ್ಥಿತಿಗೆ ಹಿಡಿದ ಕನ್ನಡಿಯಂತಾಗಿದೆ.

ಈ ರೀತಿ ಮುಂದುವರೆದ ಬಸವಣ್ಣನವರ ಉದ್ದೇಶಪೂರಿತ ಅವಹೇಳನಕ್ಕೆ ಕಡಿವಾಣ ಹಾಕಬೇಕು ಎಂದರೆ ಕರ್ನಾಟಕದಾದ್ಯಂತ ಇಂತವರ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 302 ರ ಅಡಿ ಪ್ರಕರಣ ದಾಖಲಿಸಿ ಸರಿಯಾದ ಶಾಸ್ತಿ ಮಾಡಲೇ ಬೇಕಿದೆ. ಈ ಲೇಖನ ಆಧರಿಸಿ ದೂರು ದಾಖಲಿಸಲು ಇಚ್ಚಿಸುವವರು ನನ್ನನ್ನು ಸಂಪರ್ಕಿಸಿದರೆ, ನಾನು ಎಲ್ಲಾ ದೂರುಗಳಿಗೂ ಸಾಕ್ಷಿಯಾಗಿ ನಿಲ್ಲಲು ಸಿದ್ದನಿದ್ದೇನೆ.

- ಕಿರಣ್. ಬಿ.

Tuesday, January 21, 2025

ಗಾಂಧೀಜಿ ಬಯಸಿದ್ದು ರಾಮರಾಜ್ಯವೆಂಬ ಖಲೀಫನ ಆಡಳಿತವನ್ನ..!!

ಜನವರಿ22, 2025

ರಘುಪತಿ ರಾಘವ ರಾಜಾರಾಮ್

ಪತೀತ ಪಾವನ ಸೀತಾರಾಂ ||

ಈಶ್ವರ್ ಅಲ್ಲಾ ತೆರೊ ನಾಮ್

ಸಬ್ಕೋ ಸನ್ಮತಿ ದೇ ಭಗವಾನ್ ||

ರಾಮನ ಭಕ್ತರೆಂದು ಕರೆಯಿಸಿಕೊಂಡ ಗಾಂಧೀಜಿಯವರು ಈ ಗೀತೆಯನ್ನ ಎಲ್ಲರಿಗೂ ಕೇಳಿಸಿ ರಾಮ ನಾಮ ಜಪ ಮಾಡುತ್ತಿದ್ದರು. ರಾಮ ಮತ್ತು ರಾಮರಾಜ್ಯದ ಬಗ್ಗೆ ಹತ್ತಾರು ಕಡೆ ಮಾತನಾಡಿದ್ದಾರೆ ಮತ್ತು ಬರೆದಿದ್ದಾರೆ. ರಾಮನ ಬಗ್ಗೆ ಅದೆಷ್ಟು ಮಾತಾಡಿದ್ದಾರೆಂದರೆ ಇತಿಹಾಸಕಾರರು ಗಾಂಧೀಜಿಯವರು ರಾಮನ ಪರಮ ಭಕ್ತರೆಂದೇ ಚಿತ್ರಿಸಿ ತೋರಿಸಿದ್ದಾರೆ. ಗಾಂಧೀಜಿಯವರು ತಮ್ಮ ಜೀವನದ ಕೊನೆಯ ಕ್ಷಣದಲ್ಲಿ “ಹೇ ರಾಮ್” ಎಂದು ಉದ್ಗರಿಸಿದರೆಂದು ನಮಗೆ ತಿಳಿಸಲಾಗುತ್ತದೆ. ಎಲ್ಲ ಇತಿಹಾಸಕಾರರು ಗಾಂಧೀಜಿಯವರ ಪತ್ರಗಳು, ಪ್ರಾರ್ಥನಾ ಸಭೆಯ ಭಾಷಣಗಳು ಮತ್ತು ಅವರ ಬರಹಗಳನ್ನ ಆಧಾರವಾಗಿಟ್ಟುಕೊಂಡೇ  ಅಭಿಪ್ರಾಯ ಮಂಡಿಸುತ್ತಾರೆ. ಆದರೆ ರಾಮರಾಜ್ಯದ ಬಗ್ಗೆ ಗಾಂಧೀಜಿಯವರು ಆಳವಾಗಿ ಮತ್ತು ಸ್ಪಷ್ಟವಾಗಿ ಪ್ರತಿಪಾದಿಸಿದ ಎಷ್ಟೋ ವಿಷಯಗಳು ವಿಮರ್ಶೆಯಿಂದ ತಪ್ಪಿಸಿಕೊಂಡಿವೆ. ನಿಜವಾಗಿ ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆ ಎನಾಗಿತ್ತು ಎಂಬುದನ್ನ ಅವರ 1929ರ ಭೊಪಾಲ್ ಮತ್ತು 1947 ರ ಹೈಂಚಾರ್ ಭಾಷಣಗಳಿಂದ ತಿಳಿಯಬಹುದು.

ಭೋಪಾಲ್ ಸಾರ್ವಜನಿಕ ಸಭೆ: ಸೆಪ್ಟೆಂಬರ್ 10, 1929 ರಂದು ಭೊಪಾಲ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತಾಡುತ್ತಾ ಗಾಂಧೀಜಿಯವರು ಹೀಗೆ ವಿವರಿಸುತ್ತಾರೆ;

“ನನ್ನ ಪ್ರಕಾರ ರಾಮರಾಜ್ಯವೆಂದರೆ ಅದು ಹಿಂದೂ ರಾಜ್ಯವಲ್ಲ, ಬದಲಿಗೆ ಅದು ದೇವರ ರಾಜ್ಯ. ನನಗೆ ರಾಮ ಮತ್ತು ರಹಿಮ ಎರಡೂ ಒಂದೇ. ಸತ್ಯ ಮತ್ತು ಸನ್ನಡತೆಯ ಏಕ ದೇವನಲ್ಲದೆ ಬೇರೆ ಯಾವ ದೇವರನ್ನೂ ನಾನು ಒಪ್ಪುವುದಿಲ್ಲ. ನನ್ನ ಕಲ್ಪನೆಯ ರಾಮ ಈ ಭೂಮಿಯ ಮೇಲೆ ಬದುಕಿದ್ದನೋ ಅಥವಾ ಇಲ್ಲವೋ ಗೊತ್ತಿಲ್ಲ, ಆದರೆ ಪುರಾತನ ಸಮಯದ ಆದರ್ಶ ರಾಮರಾಜ್ಯವು ಒಂದು ನಿಜವಾದ ಪ್ರಜಾಪ್ರಭುತ್ವವಾಗಿತ್ತು. ಅಲ್ಲಿ ಪ್ರತಿ  ಪ್ರಜೆಯೂ ಯಾವುದೇ ಸಮಯ ವಿಳಂಬವಿಲ್ಲದ ಮತ್ತು ದುಬಾರಿಯಲ್ಲದ ಕಾರ್ಯವಿಧಾನದಿಂದ ನ್ಯಾಯ ಪಡೆಯುವರು. ಅಲ್ಲಿ ನಾಯಿಯೂ ಕೂಡ ನ್ಯಾಯ ಪಡೆಯಿತೆಂದು ಕವಿ ವರ್ಣಿಸಿದ್ದಾನೆ.” (Young India, 19-9-1929) (Collected Works of Mahatma Gandhi, Volume 47, ಪುಟ 41)

ಗಾಂಧೀಜಿಯವರು ಇಲ್ಲಿ ತಾವೇ ಹೇಳಿರುವಂತೆ ಅವರ ಕಲ್ಪನೆಯ ರಾಮ ಎಂದಾದರೂ ಭೂಮಿಯ ಮೇಲೆ ಬದುಕಿದ್ದನೋ ಅಥವಾ ಇಲ್ಲವೋ ಎನ್ನುವುದು ಅವರಿಗೆ ಗೊತ್ತಿಲ್ಲ, ಅಂದರೆ ಅವರ ಪಾಲಿಗೆ ರಾಮನೊಬ್ಬ ಕಾಲ್ಪನಿಕ ವ್ಯಕ್ತಿ ಹಾಗೂ ರಾಮಾಯಣ ಒಂದು ಮಹಾಕಾವ್ಯವಷ್ಟೆ. ರಾಮ ಮತ್ತು ರಹಿಮ ಎರಡೂ ಒಂದೇ ಎನ್ನುತ್ತಿದ್ದ ಗಾಂಧೀಜಿ ಬಯಸಿದ್ದು ದೇವರ ರಾಜ್ಯವನ್ನು (Kingdom of God). ಈ ದೇವರ ಸಾಮ್ರಾಜ್ಯವನ್ನ ಗಾಂಧೀಜಿಯವರು ಮತ್ತಷ್ಟು ಸ್ಪಷ್ಟವಾಗಿ ವಿವರಿಸಿದ್ದು ದಶಕಗಳ ನಂತರ 1947 ರಲ್ಲಿ.

ಹೈಂಚಾರ್ ಪ್ರಾರ್ಥನಾ ಸಭೆ: ಮತ್ತೊಮ್ಮೆ ಫೆಬ್ರುವರಿ 26, 1947 ರಂದು ಬಂಗಾಳದ ಹೈಂಚಾರ್ ಪ್ರಾರ್ಥನಾ ಸಭೆಯಲ್ಲಿ ಮಾತಾಡುತ್ತಾ ಗಾಂಧೀಜಿಯವರು ತಮ್ಮ ಪರಿಕಲ್ಪನೆಯ ರಾಮರಾಜ್ಯದ ವಿಸ್ತಾರವಾದ ವಿವರಣೆ ಕೊಡುತ್ತಾರೆ.

ಗಾಂಧೀಜಿಯವರು ತಮ್ಮ ಆದರ್ಶ ಸಮಾಜಕ್ಕೆ ರಾಮರಾಜ್ಯ ಎಂದು ಹೆಸರಿಸಿದರು. “ರಾಮ ರಾಜ್ಯವೆಂದರೆ ಹಿಂದೂಗಳ ಆಡಳಿತವೆಂದು ತಿಳಿಯುವ ತಪ್ಪನ್ನು ಯಾರೂ ಮಾಡಬಾರದು. ಖುದಾ ಅಥವಾ ಗಾಡ್ ಅನ್ನುವುದು ನನ್ನ ರಾಮನಿಗಿರುವ ಇತರೆ ಹೆಸರುಗಳು. ನನಗೆ, ಭೂಮಿಯ ಮೇಲಿರುವ ದೇವರ ಸಾಮ್ರಾಜ್ಯದಂತೆ ಖುದಾನ ಆಡಳಿತ ಬೇಕು. ಇದನ್ನು ತಕ್ಕ ಮಟ್ಟಿಗೆ ಮೊದಲ ನಾಲ್ಕು ಖಲೀಫರ ಆಡಳಿತಕ್ಕೆ ಹೋಲಿಸಬಹುದು. ಇಂತ ರಾಜ್ಯದ ಸ್ಥಾಪನೆಯಿಂದ ಕೇವಲ ಭಾರತೀಯ ಜನರಿಗಷ್ಟೆ ಅಲ್ಲದೆ ಇಡೀ ಪ್ರಪಂಚದ ಕಲ್ಯಾಣವಾಗುವುದು” ಎಂದು ಪ್ರತಿಪಾದಿಸಿದರು. (Collected Works of Mahatma Gandhi, Volume 94, ಪುಟ 46)


ಈ ಬಾರಿಯ ರಾಮರಾಜ್ಯದ ವ್ಯಾಖ್ಯಾಯನವು ಮತ್ತಷ್ಟು ಸ್ಪಷ್ಟವಾಗಿದೆ. ಇಲ್ಲಿ ಖುದಾನ ರಾಜ್ಯವೆಂದರೆ ಅದು ಖಲೀಫನ ಮೂಲಕ ಭೂಮಿಯ ಮೇಲೆ ಸ್ಥಾಪಿಸಲಾಗುವ ಅಲ್ಲಾನ ಆಡಳಿತ. ಹಾಗಾಗಿಯೇ ಗಾಂಧೀಜಿಯವರು ಅವರ ಕಲ್ಪನೆಯ ರಾಮರಾಜ್ಯವನ್ನು ನೇರವಾಗಿ ಮೊದಲ ನಾಲ್ಕು ಖಲೀಫರ ಆಡಳಿತಕ್ಕೆ ಹೋಲಿಸಿದ್ದು. ಇಸ್ಲಾಂನ ನಂಬುಗೆಯಂತೆ ಲೋಕ ಕಲ್ಯಾಣಕ್ಕಾಗಿ ಖಲೀಫನ ಮೂಲಕ ಇಡೀ ಪ್ರಪಂಚವು ಖುದಾನ ಆಳ್ವಿಕೆಗೆ ಒಳಪಡಬೇಕು. ಗಾಂಧೀಜಿಯವರು ಅವರ ಕಲ್ಪನೆಯ ರಾಮರಾಜ್ಯವನ್ನು ಮೊದಲ ನಾಲ್ಕು ಖಲೀಫರ ಆಡಳಿತಕ್ಕೆ ಹೋಲಿಸಲು ಕಾರಣ ಆ ನಾಲ್ಕೂ ಖಲೀಫರು ಪ್ರವಾದಿ ಮಹಮ್ಮದ್ ಕಾಲದವರು ಮತ್ತು ಇಸ್ಲಾಂ ಜಗತ್ತಿನಲ್ಲಿ ಇವರುಗಳ ಆಡಳಿತವನ್ನ ಅಲ್ ರಶಿದುನ್ (ಸರಿಯಾಗಿ ಮಾರ್ಗದರ್ಶನ ಪಡೆದವರು) ಎನ್ನುತ್ತಾರೆ. ಈ ಕಾರಣದಿಂದಾಗಿಯೇ ಗಾಂಧೀಜಿಯವರು ತಮ್ಮ ಕಲ್ಪನೆಯ ರಾಮರಾಜ್ಯವನ್ನು ಖಲೀಫರ ಆಡಳಿತಕ್ಕೆ ಹೊಲಿಸಿದ್ದು ಮತ್ತು ಅದರಿಂದ ಲೋಕ ಕಲ್ಯಾಣವಾಗುವುದೆಂದು ಪ್ರತಿಪಾದಿಸಿದ್ದು..!

ಏಪ್ರಿಲ್ 28, 1946 ರಂದು ಹರಿಜನ ಪತ್ರಿಕೆಯಲ್ಲಿ ಪ್ರಕಟವಾದ ಮತ್ತೊಂದು ಲೇಖನದಲ್ಲಿ ಗಾಂಧೀಜಿಯವರು ತಾವು ಮಾತನಾಡಿದ ರಾಮನಿಗೂ ರಾಜ ದಶರಥನ ಮಗ, ಅಯೋಧ್ಯೆಯ ಆಡಳಿತಗಾರನಾದ ಐತಿಹಾಸಿಕ ರಾಮನಿಗೂ ಯಾವುದೇ ಸಂಭಂದವಿಲ್ಲವೆಂದು ಮತ್ತೊಮ್ಮೆ ಸ್ಪಷ್ಟೀಕರಿಸುತ್ತಾರೆ.

ಗಾಂಧೀಜಿಯವರ ಕಾಲದಲ್ಲೂ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ಕಟ್ಟಲು ಹೋರಾಟ ಮಾಡುತ್ತಿದ್ದ ಜನರಿದ್ದರು. ಗಾಂಧೀಜಿಯವರ ರಾಮ ಧುನ್ ಕೇಳಿ ಅವರೊಬ್ಬ ಪರಮ ರಾಮ ಭಕ್ತರೆಂದೇ ಭಾವಿಸಿದವರಿದ್ದರೂ, ಇನ್ನೊಂದೆಡೆ ರಾಮ ಕಾಲ್ಪನಿಕ, ರಾಮರಾಜ್ಯವೆಂದರೆ ಅದು ಹಿಂದೂಗಳ ರಾಜ್ಯವಲ್ಲವೆಂದು ಅರ್ಥ ಮಾಡಿಕೊಂಡ ರಾಮ ಭಕ್ತರು ಅದೆಷ್ಟು ನೊಂದುಕೊಂಡಿರಬಹುದು. ಅಂತೂ, ಐದು ಶತಮಾನಗಳ ನಿರಂತರ ಹೋರಾಟದ ಪರಿಣಾಮ ಜನವರಿ 22, 2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯಾಯಿತು. ಈ ವೇಳೆ ಹಿನ್ನೆಲೆಯಲ್ಲಿ ಪ್ರಸಾರವಾದ

ರಘುಪತಿ ರಾಘವ ರಾಜಾರಾಮ್

ಪತೀತ ಪಾವನ ಸೀತಾರಾಂ ||

ಸುಂದರ ವಿಗ್ರಹ ಮೇಘಶ್ಯಾಮ್

ಗಂಗಾ ತುಳಸಿ ಸಾಲಿಗ್ರಾಂ ||

ಎಂಬ ಮೂಲ ಗೀತೆ ಕೇಳಿ ನನ್ನಂತೆಯೇ ಸಾಕಷ್ಟು ರಾಮ ಭಕ್ತರಿಗೆ ಸ್ವಲ್ಪ ನೆಮ್ಮದಿ ಕೊಟ್ಟಿರಬಹುದು. ಆ ದಿನ ರಾಮ ಮಂದಿರ ಮತ್ತು ರಾಮಧುನ್ ಎರಡನ್ನೂ ಸರಿಪಡಿಸಲಾಯಿತು. ಭಾರತೀಯ ಸಂಸ್ಕೃತಿಗೆ ಸಂಭಂದಿಸಿದ ವಿಷಯಗಳನ್ನ ಸರಿಪಡಿಸಿದ್ದು ಸ್ವಲ್ಪವೇ, ಸರಿಪಡಿಸಬೇಕಾಗಿದ್ದು ಸಾಕಾಷ್ಟಿದೆ.

ರಾಮರಾಜ್ಯಕ್ಕೆ ಜಯವಾಗಲಿ..!!

-       ಕಿರಣ್ ಬಿ



Friday, November 15, 2024

ಅಂಬೇಡ್ಕರ್ ಇಸ್ಲಾಂ ಸೇರಲು ಬಯಸಿದ್ದರೆಂಬ ಸುಳ್ಳು..


ಹೊಸದಿಗಂತ

ನವೆಂಬರ್ 16, 2024.

ಚುನಾವಣಾ ರಾಜಕೀಯದ ಮೇಲಾಟದಲ್ಲಿ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಲೇ ಬೇಕು, ಪ್ರತಿಯೊಂದು ಸಮುದಾಯವನ್ನ ಹೇಗಾದರೂ ಮಾಡಿ ಓಲೈಸಿ ವೋಟು ಗಿಟ್ಟಿಸಬೇಕು ಎಂದು ಎಲ್ಲ ರೀತಿಯ ತಂತ್ರಗಾರಿಕೆ ಮಾಡುವುದು ಹೊಸದಲ್ಲ. ಆದರೆ ಇತಿಹಾಸವನ್ನೇ ತಿರುಚುವ ಅಥವಾ ನೇರವಾಗಿ ಸುಳ್ಳು ಹೇಳುವ ಹಂತಕ್ಕೆ ಹೋಗುವುದು ಎಷ್ಟು ಸರಿ.

ಹೌದು, ಶಿಗ್ಗಾವಿ ವಿಧಾನಸಭ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೇಸ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಿದ ಸಯ್ಯದ್ ಅಜ್ಜಂಪೀರ್ ಖಾದ್ರಿಯವರು ಆದಿ ಜಾಂಬವ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸ್ವೀಕಾರ ಮಾಡಲು ಸಿದ್ದತೆ ಮಾಡಿಕೊಂಡಿದ್ದರು ಆದರೆ ಕೊನೆಗೆ ಬೌದ್ಧ ಧರ್ಮ ಸೇರಿದರು, ಹಾಗೇನಾದರು ಅವರು ಇಸ್ಲಾಂಗೆ ಮತಾಂತರ ಆಗಿದ್ದರೆ ಇಂದು ಸಮಸ್ತ ದಲಿತ ಸಮಾಜ ಬಾಂಧವರು  ಮುಸಲ್ಮಾನರಾಗಿರುತ್ತಿದ್ದರು, ಡಾ. ಜಿ ಪರಮೇಶ್ವರ್ ಹೋಗಿ ಫೀರ್ ಸಾಹೇಬ್ ಆಗ್ತಿದ್ರು, ಹನುಮಂತಯ್ಯ ಹೋಗಿ ಹಸನ್ ಸಾಬ್ ಆಗ್ತಿದ್ರು, ಮುಸ್ಲಿಂ-ದಲಿತರ ಸಂಬಂಧ ಅವಿನಾಭಾವದ್ದು ಅದಕ್ಕಾಗಿಯೇ ದಲಿತ ಕೆರಿಗಳಿದ್ದಲ್ಲೆಲ್ಲಾ ದರ್ಗಾಗಳಿವೆ ಎಂದು ಅವರು ಹೇಳಿದರು.

ರಾಜಕೀಯ ಲಾಭಕ್ಕಾಗಿ ಈ ದಲಿತ-ಮುಸ್ಲಿಂ ಜೋಡಣೆಯ ಹುನ್ನಾರ ಇಂದು ನಿನ್ನೆಯದಲ್ಲ. ಸ್ವಾತಂತ್ರ ಪೂರ್ವದಿಂದಲೂ ನಡೆದು ಬಂದಿರುವಂತದ್ದು. ಹಾಗಾದ್ರೆ ಅಂಬೇಡ್ಕರರ ಕುರಿತಾದ ಈ ಹೊಸ ಹೇಳಿಕೆಯಲ್ಲಿ ಎಷ್ಟು ಸತ್ಯತೆ ಅಡಗಿದೆ ಅಂತ ಇತಿಹಾಸದ ಪುಟಗಳನ್ನ ತಿರುವಿದಾಗ ಕಾಣುವುದು ಬೇರೆಯದೇ ಚಿತ್ರಣ. ಹೈದರಾಬಾದ್ ನಿಜಾಮ ಇಸ್ಲಾಂಗೆ ಮತಾಂತರವಾಗುವಂತೆ ಆಹ್ವಾನ ಕೊಟ್ಟು ಐದು ಕೋಟಿ ರೂಪಾಯಿಗಳ ಆಮಿಷ ಒಡ್ಡಿದಾಗ ಅಂಬೇಡ್ಕರರು ಅದನ್ನ ಸಾರಾಸಗಟಾಗಿ ತಿರಸ್ಕರಿಸಿದ್ದರು. ಕ್ರೈಸ್ತ ಮಿಷಿನರಿಗಳ ತಂತ್ರಕ್ಕೂ ಮಣಿದಿರಲಿಲ್ಲ. ಭಾರತೀಯ ಮೂಲ ಸಂಸ್ಕೃತಿಯ ಒಂದು ಭಾಗವೇ ಆಗಿರುವ ಬೌದ್ಧ ಧರ್ಮ ಸ್ವೀಕರಿಸಿದ್ದರು. ಯಾವುದೇ ವಿದೇಶಿ ಧರ್ಮಕ್ಕೆ ಹೋದರೂ ಅದು ಭಾರತೀಯ ಸಂಸ್ಕೃತಿಯ ವಿರುದ್ದವಾದದ್ದು ಎಂದು ಬಲವಾಗಿ ನಂಬಿದ್ದವರು. ಅಂತವರು ಇಸ್ಲಾಂಗೆ ಮತಾಂತರವಾಗಲು ಸಿದ್ದತೆ ಮಾಡಿಕೊಂಡಿದ್ದರು ಅನ್ನುವ ಹೇಳಿಕೆಯಲ್ಲಿ ಹುರುಳೇ ಇಲ್ಲ ಅನ್ನುವುದನ್ನ ಅವರ ಬರಹಗಳಿಂದಲೇ ತಿಳಿದುಕೊಳ್ಳುವ ಹೇರಳ ಅವಕಾಶ ಇರುವುದು ನಮ್ಮ ಅದೃಷ್ಟವೆ ಸರಿ, ಇಲ್ಲದಿದ್ದರೆ ರಾಜಕಾರಣಿಗಳು ಹಾರಿಸಿಬಿಡುವ ಸುಳ್ಳುಗಳೇ ಸತ್ಯವೆಂದು ನಂಬುವ ಒಂದು ದೊಡ್ಡ ಅಮಾಯಕ ವರ್ಗವೇ ಇದೆ.

ಬಾಬಾ ಸಾಹೇಬ್ ಅಂಬೇಡ್ಕರರು ಇಸ್ಲಾಂ ಕುರಿತಾದ ತಮ್ಮ ಖಚಿತವಾದ ನಿಲುವನ್ನು ಅವರ ಕೃತಿ “ಪಾಕಿಸ್ತಾನ ಆರ್ ಪಾರ್ಟೀಷನ್ ಆಫ್ ಇಂಡಿಯ”ದಲ್ಲಿ ಸ್ಪಷ್ಟವಾಗಿ ಉದಾಹರಣೆಗಳೊಂದಿಗೆ ದಾಖಲಿಸಿದ್ದಾರೆ. ಅದರ ಕೆಲವು ಮುಖ್ಯಾಂಶಗಳನ್ನ ಅವಲೋಕಿಸಿದಾಗ ಸ್ಪಷ್ಟವಾಗುವ ಒಂದು ವಿಷಯವೆಂದರೆ ಅಜ್ಜಂಪೀರ್ ಖಾದ್ರಿಯವರು ಕೇವಲ ದಲಿತ ಬಾಂಧವರ ಓಟಿಗಾಗಿ ಮಾಡಿದ ತಂತ್ರವೇ ಹೊರತು ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲವೆಂದು.

-       ಮುಸಲ್ಮಾನರು ಭಾರತಕ್ಕೆ ನಿಷ್ಟೆಯುಳ್ಳವರಾಗಿರಲು ಸಾಧ್ಯವಿಲ್ಲ. 1919 ರಲ್ಲಿ ಭಾರತೀಯ ಮುಸಲ್ಮಾನರು ಮಾಡಿದ ಖಿಲಾಫತ್ ಚಳುವಳಿಯ ಸಮಯದಲ್ಲಿ ಅಫ್ಘಾನಿಸ್ತಾನದ ಅಮೀರ್ ನಿಗೆ ಭಾರತದ ಮೇಲೆ ದಾಳಿ ಮಾಡಲು ಆಹ್ವಾನ ಕೊಟ್ಟಿದ್ದರು. (ಪುಟ 98)

-       ಇಸ್ಲಾಂ ಧರ್ಮದ ತತ್ವ: ಮುಸ್ಲಿಂ ಆಳ್ವಿಕೆಗೆ ಒಳಪಡದ ದೇಶದಲ್ಲಿ ಮುಸ್ಲಿಂ ಕಾನೂನು ಮತ್ತು ದೇಶದ ಕಾನೂನಿನ ನಡುವೆ ಸಂಘರ್ಷವಿದ್ದಲ್ಲಿ, ಮುಸಲ್ಮಾನರು ದೇಶದ ಕಾನೂನು ದಿಕ್ಕರಿಸಿ ಇಸ್ಲಾಂ ಕಾನೂನನ್ನ ಒಪ್ಪುವುದು ನ್ಯಾಯಸಮ್ಮತ (ಪುಟ 292)

-       ಮುಸಲ್ಮಾನರ ಕಾನೂನಿನಂತೆ ಪ್ರಪಂಚವು ಎರಡು ಭಾಗವಾಗಿದೆ. ಅದು ದಾರುಲ್ ಇಸ್ಲಾಂ (ಇಸ್ಲಾಂನ ಪವಿತ್ರ ಭೂಮಿ) ಮತ್ತು ದಾರುಲ್ ಹರಬ್(ಯುದ್ದ ಭೂಮಿ). ಮುಸಲ್ಮಾನರ ಆಡಳಿತ ಇರುವ ದೇಶವು ದಾರುಲ್ ಇಸ್ಲಾಂ ಅಂತ ಕರೆಯಲ್ಪಡುತ್ತದೆ. ಮುಸಲ್ಮಾನರು ಕೇವಲ ವಾಸಿಸುತ್ತಿದ್ದು ಅಲ್ಲಿ ಅವರ ಆಡಳಿತವಿಲ್ಲದಿದ್ದರೆ ಅದು ದಾರುಲ್ ಹರಬ್ ಎಂದು ಕರೆಯಲ್ಪಡುತ್ತದೆ. ಹೀಗೆ ಒಂದು ದೇಶವು ಇಸ್ಲಾಂ ದೇಶವಾಗಬಹುದು ಅಥವಾ ಯುದ್ದಭೂಮಿ ಆಗಬಹುದು. ಹಿಂದೂ-ಮುಸ್ಲಿಮರು ಸಮನಾಗಿ ಜೀವಿಸುವ ಭಾರತವು ಮುಸಲ್ಮಾನರಿಗೆ ಎಂದೂ ತಾಯ್ನೆಲವಾಗದು, ಅದು ಕೇವಲ ಯುದ್ದ ಭೂಮಿ ಅಷ್ಟೇ. (ಪುಟ 294)

-       ಭಾರತವು ಒಂದು ವೇಳೆ ಮುಸ್ಲಿಮರ ಆಳ್ವಿಕೆಗೆ ಒಳಪಡದಿದ್ದರೆ, ಅದು ದಾರುಲ್ ಹರಬ್ ಆಗಿರುತ್ತದೆ ಮತ್ತು ಇಸ್ಲಾಂನ ಪ್ರಕಾರ ಮುಸಲ್ಮಾನರು ಭಾರತದ ಮೇಲೆ ಜಿಹಾದ್ ಮಾಡಲು ಅವಕಾಶ ನೀಡುತ್ತದಲ್ಲದೆ, ಈ ಕಾರ್ಯ ಯಶಸ್ವಿ ಆಗಲು ಯಾವುದೇ ವಿದೇಶಿ ಮುಸ್ಲಿಮರ ಸಹಾಯ ತೆಗೆದುಕೊಳ್ಳಬಹುದಾಗಿದೆ ಅಥವಾ ಯಾವುದೇ ವಿದೇಶಿ ಮುಸ್ಲಿಂ ಶಕ್ತಿಯು ಭಾರತದ ಮೇಲೆ ಜಿಹಾದ್ ಘೋಷಿಸಿದರೆ ಅದಕ್ಕೆ ಮುಸಲ್ಮಾನರು ಸಹಾಯ ಮಾಡಬೇಕು. (ಪುಟ 296)

 

-       ಮತ್ತೊಂದು ಮುಖ್ಯ ಅಂಶವೆಂದರೆ, ಗಡಿ ಗುರುತಿಸುವ ಮತ್ತು ಅದಕ್ಕೆ ಒಳಪಡುವುದನ್ನ ಇಸ್ಲಾಂ ಒಪ್ಪುವುದಿಲ್ಲ ಮತ್ತು ಇದುವೆ ಅಖಂಡ ಇಸ್ಲಾಂ (ಪ್ಯಾನ್ ಇಸ್ಲಾಮಿಸ್ಮ್) ತತ್ವಕ್ಕೆ ಮೂಲಾದಾರ. ಇದುವೇ ಭಾರತದ ಮುಸಲ್ಮಾನರು ಮೊದಲು ಮುಸಲ್ಮಾನರು ಮತ್ತು ನಂತರದಲ್ಲಿ ಭಾರತೀಯ ಎಂದು ಹೇಳುವುದಕ್ಕೆ ದಾರಿ ಮಾಡಿ ಕೊಡುವ ತತ್ವ. ಇದು ಭಾರತೀಯ ಮುಸಲ್ಮಾನರು ಯಾಕೆ ಭಾರತದ ಏಳಿಗೆಗೆ ಯಾಕೆ ಕಡಿಮೆ ದುಡಿದಿದ್ದಾರೆ ಮತ್ತು ಮುಸ್ಲಿಂ ದೇಶಗಳಿಗಾಗಿಯೇ ಅವರನ್ನ ತೊಡಗಿಸಿಕೊಳ್ಳುತ್ತಾರೆ ಮತ್ತು ಅವರ ಯೋಚನೆಯಲ್ಲಿ ಮುಸ್ಲಿಂ ದೇಶಗಳು ಮೊದಲು ನಂತರ ಭಾರತ ಬರುತ್ತದೆ ಎಂಬುದನ್ನು ವಿವರಿಸುತ್ತದೆ. (ಪುಟ 297)

 

-       ಕೋಮು ಸೌಹಾರ್ದತೆ ಅಸಾಧ್ಯ: ಮುಸಲ್ಮಾನರು ದೇಶದ ಎಲ್ಲೆಡೆ ಹರಡಿರುವುದರಿಂದ ವಿಭಜನೆಯ ನಂತರವೂ ಭಾರತದಲ್ಲಿ ಉಳಿಯುವುದರಿಂದ ಏಕರೂಪದ ದೇಶವಾಗಲು ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಭಾರತ ಏಕರೂಪತೆ ತರಲು ಜನಸಂಖ್ಯೆಯ ವಿನಿಮಯದಿಂದ ಮಾತ್ರ ಸಾಧ್ಯ. ಜನಸಂಖ್ಯೆ ವಿನಿಮಯ ಆಗುವವರೆಗೂ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ಸಮಸ್ಯೆ ಮುಂದುವರೆದು ಭಾರತದ ಸಮಾಜದಲ್ಲಿ ಅಶಾಂತಿ ಉಂಟುಮಾಡಲಿದೆ. (ಪುಟ 117)

 

-       ಹಿಂದೂ ಆಡಳಿತ ಒಪ್ಪಲಾರರು: ಹಿಂದೂಗಳನ್ನೊಳಗೊಂಡ ಸರಕಾರದ ಆಡಳಿತದಲ್ಲಿ ಮುಸಲ್ಮಾನರು ಎಷ್ಟರ ಮಟ್ಟಿಗೆ ಹೊಂದಿಕೊಳ್ಳುವರು ಅನ್ನುವ ಪ್ರಶ್ನೆ ಎದ್ದರೆ, ಅದಕ್ಕೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇಲ್ಲ, ಮುಸ್ಲಿಮರಿಗೆ ಹಿಂದೂಗಳೆಂದರೆ ಕಾಫಿರರು. ಕಾಫಿರರು ಗೌರವಕ್ಕೆ ಅನರ್ಹರು. ಅವರು ಕೀಳು, ಅದಕ್ಕಾಗಿ ಅವರಿಂದ ನಡೆಸಲ್ಪಡುವ ದೇಶವು ದಾರುಲ್ ಹರಬ್, ಹಿಂದೂಗಳ ಆಡಳಿತವನ್ನು ಮುಸ್ಲಿಮರು ಒಪ್ಪುವುದಿಲ್ಲವೆನ್ನಲು ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾಗಿಲ್ಲ. (ಪುಟ 301)

ಹಿಂದೂ-ಮುಸ್ಲಿಂ ಸಾಮರಸ್ಯದ ಬಗ್ಗೆ ಅಂಬೇಡ್ಕರರನ್ನ ಉಲ್ಲೇಖಿಸುವ ಸಯ್ಯದ್ ಅಜ್ಜಂಪೀರ್ ಖಾದ್ರಿಯವರು ಈ ವಿಷಯದಲ್ಲಿ ಬಹುಮುಖ್ಯವಾದ ಅವರ ಪಾಕಿಸ್ತಾನ ಆರ್ ಪಾರ್ಟೀಷನ್ ಆಫ್ ಇಂಡಿಯ ವನ್ನು ಯಾಕೆ ಓದಿಕೊಂಡಿಲ್ಲವೆನ್ನುವುದು ಆಶ್ಚರ್ಯಕರವಾದ ವಿಷಯ.

ಅಂಬೇಡ್ಕರರು ಭಾರತಿಯರಿಗೆ ಎಂದೆಂದಿಗೂ ಆದರ್ಶಪ್ರಾಯರು, ಅವರ ಅಧ್ಯಯನ ಮತ್ತು ಅನುಭವದಿಂದ ಹತ್ತಾರು ಸಲಹೆಗಳನ್ನ ಕೊಟ್ಟಿದ್ದಾರೆ. ದೇಶ ವಿಭಜನೆಯ ನಂತರ ಪಾಕಿಸ್ತಾನದಲ್ಲಿ ಸಿಲುಕಿದ ದಲಿತರನ್ನ ಕುರಿತು ನವೆಂಬರ್  1947 ರಲ್ಲಿ ಅಂಬೇಡ್ಕರರು ಪತ್ರಿಕಾ ಹೇಳಿಕೆ ಕೊಟ್ಟು ಅಲ್ಲಿ ಸಿಲುಕಿರುವ ದಲಿತರು ಯಾವ ಮಾರ್ಗ ಸಿಗುತ್ತದೋ ಅದನ್ನ ಹಿಡಿದು ತಕ್ಷಣ ಭಾರತಕ್ಕೆ ಬನ್ನಿ,  ಪಾಕಿಸ್ತಾನ ಮತ್ತು ಹೈದರಾಬಾದಿನ ಮುಸಲ್ಮಾನರು ನಂಬಿಕೆಗೆ ಅರ್ಹರಲ್ಲ ಅವರನ್ನ ನಂಬಬೇಡಿ ಅವರು ನಿಮ್ಮಿಂದ ಸಹಾಯ ಪಡೆಯುತ್ತಾರೆ ಆದರೆ ನೀವು ಅವರ ದೃಷ್ಟಿಯಲ್ಲಿ ಕನಿಷ್ಠ ಮತ್ತು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಿ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಇಸ್ಲಾಂಗೆ ಮತಾಂತರವಾಗಬೇಡಿ ಎಂದು ಕಳಕಳಿಯ ಕರೆ ಕೊಡುತ್ತಾರೆ.

ಹೀಗೆ, ಇಸ್ಲಾಂ ಸೌಹಾರ್ದತೆಗೆ ಪ್ರತಿಕೂಲ ವಾತಾವರಣ ನಿರ್ಮಿಸುತ್ತದೆ ಆ ಮತಕ್ಕೆ ಮತಾಂತರವಾಗಬೇಡಿ ಎಂದು ಕರೆಕೊಟ್ಟಿದ್ದ ಅಂಬೇಡ್ಕರರು ತಾವೇ ಹೇಗೆ ಅದೇ ಮತಕ್ಕೆ ಸೇರಲು ಮುಂದಾಗಿದ್ದರು ಎಂದು ಮಾನ್ಯ ಸಯ್ಯದ್ ಅಜ್ಜಂಪೀರ್ ಖಾದ್ರಿಯವರೆ ಸ್ಪಷ್ಟಪಡಿಸಬೇಕು...!!

ಕಿರಣ್. ಬಿ




Monday, October 21, 2024

ವಚನ ಸಾಹಿತ್ಯದಲ್ಲಿ ಗೋವುಗಳ ಮಹತ್ವ...



ಹೊಸ ದಿಗಂತ

22,ಅಕ್ಟೋಬರ್ 2024.

ವಚನ  ಸಾಹಿತ್ಯದಲ್ಲಿ ಗೋವುಗಳ ಮಹತ್ವ...

ಭಾರತದಲ್ಲಿ ಗೋವನ್ನ ನಮ್ಮ ರಾಷ್ಟ್ರ ಪ್ರಾಣಿ ಎಂದು ಘೋಷಿಸಲು ಮತ್ತು ಅದರ ವಧೆಯನ್ನ ನಿಷೇದಿಸುವಂತೆ ಮಾಡಿದ ನೂರಾರು ಹೋರಾಟಗಳು ಇನ್ನೂ ಸಂಪೂರ್ಣ ಫಲ ಕೊಡುವಲ್ಲಿ ವಿಫಲವಾಗಿವೆ. ಭಾರತದ ಸಂವಿಧಾನದ ವಿಧಿ 48 ರಲ್ಲಿ ಹೇಳುವಂತೆ ರಾಜ್ಯ ಸರಕಾರಗಳು ಹಸುವಿನ ತಳಿ ಸಂರಕ್ಷಣೆ ಮತ್ತು ಸುಧಾರಣೆಗೆ ಒತ್ತು ಕೊಡಬೇಕು ಹಾಗೂ ಹಸು ಕರುಗಳ ಹತ್ಯೆಯನ್ನ ನಿಷೇದಿಸುವತ್ತ ಪ್ರಯತ್ನ ಪಡಬೇಕು. ಆದರೆ ಇದು ಕೇವಲ ನಿರ್ದೇಶನಾತ್ಮಕವಾಗಿರುವುದರಿಂದ  ಧಾರ್ಮಿಕ ಪ್ರಜ್ಞೆಯಿಲ್ಲದ ರಾಜ್ಯ ಸರಕಾರಗಳು ಇದನ್ನ ಬಹುಸಂಖ್ಯಾತ ಪ್ರಜೆಗಳ ಧಾರ್ಮಿಕ ಭಾವನೆಗಳಿಗೆ ಅನುಗುಣವಾಗಿಯೇ ಕಾನೂನು ರಚಿಸುವುದು ಕಷ್ಟ. ಶರಣರ ನಾಡು ಕರ್ನಾಟಕದಲ್ಲಿ ಸಂಪೂರ್ಣ ಗೋಹತ್ಯೆ ನಿಷೇದವಷ್ಟೆ ಅಲ್ಲದೆ ದೇಸೀ ಹಸುಗಳ ತಳಿ ಸಂರಕ್ಷಣೆಗೂ ರಾಜ್ಯ  ಸರಕಾರ ಗಮನಹರಿಸುವಂತಾಗಬೇಕು.

ಬಸವಾದಿ ಶರಣರು ಗೋವುಗಳಿಗೆ ಇನ್ನಿಲ್ಲದ ಮಹತ್ವವನ್ನ ಕೊಟ್ಟಿದ್ದು, ಹತ್ತಾರು ವಚನಗಳಲ್ಲಿ ಗೋವುಗಳ ಬಗ್ಗೆ ಉಲ್ಲೇಖವಿದೆ. ಬಿಜ್ಜಳನ ಆಸ್ಥಾನದಲ್ಲಿ ಲೆಕ್ಕ ಪತ್ರಗಳನ್ನ ನೋಡಿಕೊಳ್ಳುತ್ತ ಗುಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಶರಣ ಗುಪ್ತ ಮಂಚಣ್ಣನವರು ಕೆಳಗಿನ ವಚನದಲ್ಲಿ ಇಡೀ ಜಗತ್ತು ಗೋವಿನ ಹಂಗಿನಲ್ಲಿದೆ ಅನ್ನುತ್ತಾರೆ,

ಜಗವೆಲ್ಲವೂ ಗೋವಿನ ಹಂಗು,

ನರ ಸುರಾದಿಗಳೆಲ್ಲರೂ ಗೋವಿನ ಹಂಗು,

ಸಕಲ ಜೀವನ ಆಧಾರ ಗೋಮರ,

ಗೋ ಪ್ರಾಣಸ್ವರೂಪ ಗೋವಿಂದನೊಡೆಯ ನಾರಾಯಣಪ್ರಿಯ ರಾಮನಾಥಾ.

 

ವಚನಕಾರ ಶರಣರು ಕಪಿಲವರ್ಣದ ನಂದಿನಿ, ಕೃಷ್ಣವರ್ಣದ ಭದ್ರೆ, ರಕ್ತವರ್ಣದ ಸುರಭಿ, ಶ್ವೇತವರ್ಣದ ಸುಶೀಲೆ ಮತ್ತು ಚಿತ್ರವರ್ಣದ ಸುಮನೆ ಎಂಬ ಪಂಚವರ್ಣದ ಗೋವುಗಳಿಗೆ ತುಂಬಾ ಮಹತ್ವಕೊಟ್ಟಿದ್ದಾರೆ. ವಿಭೂತಿ, ಪಂಚಗವ್ಯ ಹಾಗೂ ಪಂಚಾಮೃತಕ್ಕೆ ಈ ಪಂಚವರ್ಣದ ಗೋವಿನ ಗೋಮಯ, ಗೋಮೂತ್ರ ಹಾಗೂ ಹಾಲನ್ನೇ ಬಳಸಲು ಸೂಚಿಸುವಂತ ಹಲವು ವಚನಗಳಿವೆ.

 

ಇನ್ನು ಶರಣ ಷಣ್ಮುಖಸ್ವಾಮಿಯವರ ಕೆಳಗಿನ ಸುಧೀರ್ಘವಾದ ಈ ಒಂದು ವಚನವು ಜಾಬಾಲೋಪನಿಷತ್ತಿನಲ್ಲಿರುವ ಪಂಚವರ್ಣದ ಗೋವುಗಳ ಹುಟ್ಟು ಮತ್ತು ಮಹತ್ವದ ಬಗ್ಗೆ ವಿವರಿಸುತ್ತದಲ್ಲದೆ ಯಾವ ಹಸುವಿನ ಗೋಮಯದಿಂದ ಯಾವ ರೀತಿಯ ವಿಭೂತಿಯಾಗುವುದೆಂದೂ ವಿವರಿಸುತ್ತದೆ.

ಸಚ್ಚಿದಾನಂದ ಪರಶಿವನ ಸದ್ಯೋಜಾತಮುಖದಿಂದ ಪೃಥ್ವಿತತ್ತ್ವ ಪುಟ್ಟಿತ್ತು.

ಆ ತತ್ವದಿಂದೆ ನಿವೃತ್ತಿ ಎಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಕಪಿಲವರ್ಣದ ನಂದಿನಿಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಮಹದೈಶ್ವರ್ಯವನ್ನುಂಟುಮಾಡುವಂಥ ಭೂತಿ ಎಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ವಾಮದೇವಮುಖದಿಂದೆ ಅಪ್ಪುತತ್ವ ಪುಟ್ಟಿತ್ತು.

ಆ ತತ್ವದಿಂದೆ ಪ್ರತಿಷ್ಠೆಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಕೃಷ್ಣವರ್ಣದ ಭದ್ರೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ದಿವ್ಯಪ್ರಕಾಶದಿಂ ಬೆಳಗುವಂಥ ಭಸಿತವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ಅಘೋರಮುಖದಿಂದೆ ಅಗ್ನಿತತ್ವ ಪುಟ್ಟಿತ್ತು.

ಆ ತತ್ವದಿಂದೆ ವಿದ್ಯೆಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ರಕ್ತವರ್ಣದ ಸುರಭಿಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಸಮಸ್ತ ಪಾತಕಂಗಳ ಭಕ್ಷಿಸುವಂಥ ಭಸ್ಮವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ತತ್ಪುರುಷಮುಖದಿಂದೆ ವಾಯುತತ್ವ ಪುಟ್ಟಿತ್ತು.

ಆ ತತ್ವದಿಂದೆ ಶಾಂತಿಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಶ್ವೇತವರ್ಣದ ಸುಶೀಲೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಸಕಲ ವ್ಯಾಧಿಗಳ ಕೆಡಿಸುವಂಥ ಕ್ಷಾರವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ಈಶಾನ್ಯಮುಖದಿಂದೆ ಆಕಾಶತತ್ವ ಪುಟ್ಟಿತ್ತು.

ಆ ತತ್ವದಿಂದೆ ಶಾಂತ್ಯತೀತವೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಚಿತ್ರವರ್ಣದ ಸುಮನೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಭೂತ ಪ್ರೇತ ಪಿಶಾಚಿ ಬ್ರಹ್ಮರಾಕ್ಷಸ ಚೋರ ಸರ್ಪ ವ್ಯಾಘ್ರಾದಿಗಳ ಭಯವ ಕೆಡಿಸುವ ರಕ್ಷೆಯೆಂಬ ವಿಭೂತಿ ಪುಟ್ಟಿತ್ತು.

ಅದೆಂತೆಂದೊಡೆ: ಜಾಬಾಲೋಪನಿಷದಿ:

ಸದ್ಯೋಜಾತಾತ್ ಪೃಥಿವೀ ತಸ್ಯಾಃ ನಿವೃತ್ತಿಃ

ತಸ್ಯಾಃ ಗೋಮಯೇನ ವಿಭೂತಿರ್ಜಾತಾ ||

ವಾಮದೇವಾದುದಕಂ ತಸ್ಮಾತ್ ಪ್ರತಿಷ್ಠಾ

ತಸ್ಯಾಃ ಗೋಮಯೇನ ಭಸಿತಂ ಜಾತಂ ||

ಅಘೋರಾದ್ ವಹ್ನಿಃ ತಸ್ಮಾತ್ ವಿದ್ಯಾ

ತಸ್ಯಾಃ ರಕ್ತವರ್ಣಾ ಸುರಭೀ

ತಸ್ಯಾಃ ಗೋಮಯೇನ ಭಸ್ಮ ಜಾತಂ||

ತತ್ಪುರುಷಾದ್ ವಾಯುಃ ತಸ್ಮಾತ್ ಶಾಂತಿಃ

ತಸ್ಯಾಃ ಶ್ವೇತವರ್ಣಾ ಸುಶೀಲಾ

ತಸ್ಯಾಃ ಗೋಮಯೇನ ಕ್ಷಾರಂ ಜಾತಂ||

ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ

ತಸ್ಯಾಶ್ಚಿತ್ರವರ್ಣಾ ಸುಮನಾ

ತಸ್ಯಾಃ ಗೋಮಯೇನ ರಕ್ಷಾ ಜಾತಾ||''

ವಿಭೂತಿರ್ಭಸಿತಂ ಭಸ್ಮ | ಕ್ಷಾರಂ ರಕ್ಷೇತಿ ಭಸ್ಮನಃ|

ಭವಂತಿ ಪಂಚನಾಮಾನಿ| ಪಂಚಭಿರ್ನಾಮಭಿರ್ಭೃಶಮ್||''

ಐಶ್ವರ್ಯಕಾರಣಾದ್ಭೂತಿರ್ಭಾಸನಾದ್ಭಸಿತಂ ತಥಾ

ಸರ್ವಾಘಭಕ್ಷಣಾದ್ಭಸ್ಮ ಆಪದಾಂ ಕ್ಷಾರಣಾತ್ ಕ್ಷಾರಂ

ಭೂತ-ಪ್ರೇತ-ಪಿಶಾಚ ಬ್ರಹ್ಮರಾಕ್ಷಸಾಪಸ್ಮಾರ

ಭವಭೀತಿಭ್ಯೋsಭಿರಕ್ಷಣಾತ್ ರಕ್ಷೇತಿ''

ಎಂದುದಾಗಿ,

ಇಂತಪ್ಪ ಶ್ರೀ ವಿಭೂತಿಯ ನಿರಂತರ

ಸಾವಧಾನಭಕ್ತಿಯಿಂದ

ನಾನು ಸರ್ವಾಂಗದಲ್ಲಿ ಧರಸಿ ಶುದ್ಧನಿರ್ಮಲ

ಪರಮಪವಿತ್ರ ಕಾಯನಾದೆನಯ್ಯ ಅಖಂಡೇಶ್ವರಾ.

 

ಮೇಲಿನ ವಚನದಲ್ಲಿ ಜಾಬಾಲೋಪನಿಷತ್ತಿನ ಕನ್ನಡ ಅನುವಾದವಷ್ಟನ್ನೇ ಕೊಡದೆ ಸಂಸ್ಕೃತದ ಶ್ಲೋಕಗಳನ್ನೇ ಉಲ್ಲೇಖಿಸಲಾಗಿವೆ. ಶ್ರೀ ವಿಭೂತಿ ಉತ್ಪತ್ತಿಗಾಗಿ ಬೇಕಾದ ಗೋಮಯವನ್ನು ಪಂಚಗೋವುಗಳಿಂದಲೇ ಪಡೆಯಬೇಕೆಂದು ಹಲವು ಶರಣರು ಪ್ರತಿಪಾದಿಸಿದರೆ ಚನ್ನಬಸವಣ್ಣನವರು ಅದು ಯಾವ ಗೋವಿನ ಗೋಮಯವಾದರೇನು ವಿಭೂತಿ ಧರಿಸುವುದೇ ಮುಖ್ಯವೆಂದು ಹೇಳಿ ಅದರ ಮಹತ್ವವನ್ನು ಕೆಳಗಿನ ವಚನದಲ್ಲಿ ಚನ್ನಾಗಿ ವಿವರಿಸಿದ್ದಾರೆ.

 

ಅಯ್ಯಾ, ಶ್ರೀವಿಭೂತಿಯ ಸತ್ಕ್ರಿಯೆಯಿಂದ [ಮಾಡಿ]

ಧರಿಸುವ ಭೇದವೆಂತೆಂದಡೆ:

ಆವ ವರ್ಣದ ಗೋವಾದಡೆಯೂ ಸರಿಯೆ,

ಅವಯವಂಗಳು ನೂನು-ಕೂನಿಲ್ಲದೆ,

ಬರೆಗಳ ಹಾಕದೆ ಇರುವಂತಹ ಗೋವ ತಂದು,

ಅದಕ್ಕೆ ಧೂಳಪಾದೋದಕ ಸ್ನಾನವ ಮಾಡುವಂತಹದೆ ಕ್ರಿಯಾಲಿಂಗಧಾರಣದೀಕ್ಷೆ,

ಧೂಳಪಾದೋದಕಸೇವನೆಯೆ ಮಹಾತೀರ್ಥ.

ಭಕ್ತ ಆತನ ಭಾಂಡದಲ್ಲಿರುವ ಪದಾರ್ಥವ ಹಸ್ತ ಮುಟ್ಟಿ ಹಾಕಿದ ಮೇಲೆ ಮಹಾಪ್ರಸಾದವಾಯಿತ್ತು.

ಇಂತಹ ಆಚಾರಯುಕ್ತವಾದ ಗೋವಿನ ಸಗಣಿಯ

ಸ್ವಚ್ಛವಾದ ಸ್ಥಳದಲ್ಲಿ ಚೂರ್ಣ ಮಾಡಿ ಒಣಗಿಸಿ

ಕ್ರಿಯಾಗ್ನಿಯಿಂದ ದಹಿಸಿದ ಬೂದಿಯ ಧೂಳಪಾದೋದಕದಲ್ಲಿ ಶೋಧಿಸಿ,

ಅದರೊಳಗೆ ತಿಳಿಯ ತೆಗೆದು ಘಟ್ಟಿಯ ಮಾಡಿ

ಪೂರ್ವದಲ್ಲಿ [ಗುರು] ಹೇಳಿದ ವಚನೋಕ್ತಿಯಿಂದ ಧರಿಸಿದ ಲಿಂಗಾಧಾರಕಭಕ್ತಂಗೆ

ಗುರುದೀಕ್ಷೆಯುಂಟಾಗುವುದಯ್ಯಾ,

ಉಪಾಧಿಭಕ್ತಂಗೆ ಗುರುಲಿಂಗಜಂಗಮದ ಸದ್ಭಕ್ತಿ ದೊರೆವುದಯ್ಯಾ,

ನಿರುಪಾಧಿಭಕ್ತಂಗೆ ತ್ರಿವಿಧ ಪಾದೋದಕ ಪ್ರಸಾದ ದೊರೆಯುವುದಯ್ಯಾ,

ಸಹಜ ಭಕ್ತಂಗೆ ಸಚ್ಚಿದಾನಂದಪದ ದೊರೆಯುವುದಯ್ಯಾ,

ನಿರ್ವಂಚಕಭಕ್ತಂಗೆ ನಿರ್ವಾಣ ಪದವಾಗುವುದಯ್ಯಾ,

ನಿರ್ವಾಣಭಕ್ತಂಗೆ ನಿಷ್ಕಳಂಕ ಜ್ಯೋತಿರ್ಮಯ ಪರಶಿವಲಿಂಗದಲ್ಲಿ ಕೂಟಸ್ಥವಾಗಿ,

ನಿರಂಜನಜಂಗಮದಲ್ಲಿ ಕೂಡಿ ಹರಗಣಸಹವಾಗಿ

ನಿರವಯಸಮಾಧಿ ತಪ್ಪದು ನೋಡಾ ಕೂಡಲಚೆನ್ನಸಂಗಮದೇವಾ.

 

ಶ್ರೀ ವಿಭೂತಿ ಧಾರಣೆಯ ಮಹತ್ವವನ್ನು ಸೊಗಸಾಗಿ ತಿಳಿಸಿದ ಚನ್ನಬಸವಣ್ಣನವರು ಶಿವಯೋಗ ಜೀವನದ ಬಗ್ಗೆ ಬೋಧಿಸಿತ್ತಿದ್ದವರು. ಇಷ್ಟೆಲ್ಲ ಮಹತ್ವದ  ಗೋವು ಸಾಧು ಪ್ರಾಣಿ, ಪ್ರಮಾಣಿಕತೆಯ ಸಂಕೇತ ಎಂದು ಕೆಳಗಿನ ವಚನದಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ.

 

ಪಾತ್ರಾಪಾತ್ರಂಗಳ ವಿಶೇಷವೇನೆಂದರೆ,

ಗೋವು ಸರ್ಪಂಗಳ ಹಾಗೆ,

ಗೋವು ಎಂಥದೆಂದರೆ ಹುಲ್ಲಿನಿಂದ ಕ್ಷೀರವ ನೀಡುವುದು,

ಸರ್ಪವೆಂಥದೆಂದರೆ ಹಾಲು ಕುಡಿದಿ ವಿಷವ ಕಕ್ಕುವುದು,

ಪಾತ್ರ ಅಪಾತ್ರ ಈ ಪ್ರಕಾರವೆಂದು ತಿಳಿವುದಯ್ಯ ಶಾಂತವೀರೇಶ್ವರಾ

-       ಏಳಂದೂರು ಪರ್ವತ ಶಿವಯೋಗಿಯ ಏಕೋತ್ತರಶಸ್ಥಲ

ಮೇಲಿನ ವಚನದಲ್ಲಿ ಪಾತ್ರ ಅಪಾರ್ಥರು ಯಾರು ಎಂಬುದನ್ನ ತುಂಬಾ ಸೂಚ್ಯವಾಗಿ ಹೇಳಿದ್ದಾರೆ. ಶರಣರು ಶ್ರೀವಿಭೂತಿಯ ಮಹತ್ವ ತಿಳಿಸುತ್ತಾ, ಗೋವುಗಳ ಪೂಜನೀಯ ಸ್ಥಾನವನ್ನೂ ವಿವರಿಸಿದ್ದಾರೆ. ಜೊತೆಗೆ ಗೋವು ರೈತನ ಮಿತ್ರನಷ್ಟೆ ಅಲ್ಲ ಮಾನವರಿಗಿಂತ ಬುದ್ಧಿವಂತ ಪ್ರಾಣಿಯೆಂದು ಪಶುಪಾಲಕರಾಗಿದ್ದ ಶರಣ ಕೋಲ ಶಾಂತಯ್ಯನವರ ವಚನ ತುಂಬಾ ಸೊಗಸಾಗಿದೆ.

ಗೋವು ಮೊದಲು ಚತುಷ್ಟಾದಿ ಜೀವಂಗಳು

ತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯ ಬೀಡಿಂಗೆ ಹೋಹಂತೆ,

ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ.

ಬಂದುದ ಮರೆದ ಬಂಧ ಜೀವಿಗ ನಾನಾಗಿ ಜೀವಕಾಯದ ಸಂದ ಬಿಡಿಸು.

ಬಿಂದು ನಿಲುವ ಅಂದವ ಹೇಳು,

ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ

 

ಈ ರೀತಿ ಗೋವು ಮಾನವನಿಗೆ ಉಪಕಾರಿ ಹಾಗೂ ಪೂಜನೀಯವಾಗಿದೆ, ಅಂತ ಗೋವುಗಳನ್ನ ಕೊಲ್ಲಬಾರದೆಂಬುದು ಶರಣರ ಆಶಯವೇ ಆಗಿದೆ. ಗೋವುಗಳ ಕೊಲ್ಲುವವರ ಬಗ್ಗೆಯು ಉಲ್ಲೇಖವಿರುವ ಬಸವಣ್ಣನವರ ವಚನವಿದೆ. ಲಿಂಗದ ಪೂಜೆಯನ್ನ ಗೋವುಗಳ ಕೊಲುವ ಪಾಪಿಗಳ ದನಿಯು ಕೇಳುವ ಮುನ್ನವೇ ಮಾಡಬೇಕು ಎಂದು ಬಸವಣ್ಣನವರು ತಿಳಿಸಿದ್ದಾರೆ.

ಆದರೆ ಇತ್ತೀಚಿನ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಾರರು ಹಾಗೂ ಅದನ್ನ ಸಮರ್ಥನೆ ಮಾಡುವ ಸ್ವಾಮಿಜಿಗಳು ಈ ಎಲ್ಲ ವಚನಗಳನ್ನ ಅಧ್ಯಾಯಿಸಿದ್ದಾರೆಯೇ ಅನ್ನುವುದೇ ಅನುಮಾನಕರವಾಗಿದೆ. ಇತ್ತೀಚೆಗೆ ಸಾಣಿಹಳ್ಳಿ ಮಠದ ಸ್ವಾಮಿಗಳು ಗೋ ಹತ್ಯೆಯನ್ನೇ ಕಾಯಕ ಮಾಡಿಕೊಂಡಿರುವ ಮುಸ್ಲಿಮರ ಇಸ್ಲಾಂ ಮತವನ್ನ ಲಿಂಗಾಯತಕ್ಕೆ ಸಮನಾಗಿ ಕಾಣುವಂತೆ ಹೇಳಿಕೆ ಕೊಟ್ಟಾಗ ಗೋ ಆರಾಧಕ ಸನಾತನ ಪರಂಪರೆಯ ಲಿಂಗಾಯತರ ಭಾವನೆಗಳಿಗೆ ಧಕ್ಕೆ ಆಗುವುದೆಂದು ಯೋಚಿಸಲೆ ಇಲ್ಲ.

ಬಸವಣ್ಣನವರ ಅನುಯಾಯಿಗಳಾಗಿ 8 ಶತಮಾನಗಳೇ ಕಳೆದರೂ ಲಿಂಗಾಯತರು ಬಸವಾದಿ ಶರಣರ ತತ್ವಾದರ್ಶಗಳಿಗೆ ಬದ್ದರಾಗಿ ಇಂದಿಗೂ ಸಸ್ಯಾಹಾರಿಗಳಗಿದ್ದಾರೆ. ಆದರೆ ಇತ್ತೀಚೆಗೆ ಕೆಲವರು ಶರಣರು ಮಾಂಸಾಹಾರವನ್ನ ವಿರೋದಿಸಿಲ್ಲ ಅಂತೆಲ್ಲ ಹೇಳಿಕೆ ಕೊಟ್ಟು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀಳುವಂತೆ ಮಾಡಿದ್ದಾರೆ. ಶರಣರು ಈ ಬಗ್ಗೆ ಎನನ್ನ ಹೇಳಿದ್ದಾರೆಂದು ನೋಡಿದರೆ, ಮೊದಲಿಗೆ ಬಸವಣ್ಣನವರು  ಹೇಳಿದ್ದು “ದಯವಿಲ್ಲದ ಧರ್ಮವದೇವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ದಯವೇ ದರ್ಮಧ ಮೂಲವಯ್ಯ” ಎಂಬುದಾಗಿ ಸಕಲ ಜೀವ ರಾಶಿಗಳಿಗೆ ಒಳಿತನ್ನೆ ಬಯಸಿ ಹಿಂಸೆಗೆ ಕಡಿವಾಣ ಹಾಕಿದ್ದಾರೆ. ಅಲ್ಲದೆ ಬಸವಣ್ಣನವರ ಇನ್ನೊಂದು ವಚನ ಹೀಗಿದೆ

ಅಂಗದಿಚ್ಚೆಗೆ ಮದ್ಯಮಾಂಸವ ತಿಂಬರು,

ಕಂಗಳಿಚ್ಚೆಗೆ ಪರವಧುವ ನೆರೆವರು.

ಲಿಂಗಲಾಂಛನಧಾರಿಯಾದಲ್ಲಿ ಫಲವೇನು?

ಲಿಂಗಪಥವ ತಪ್ಪಿ ನಡೆವವರು

ಜಂಗಮ ಮುಖದಿಂದ ನಿಂದೆ ಬಂದಡೆ

ಕೊಂಡಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವ


ಇಲ್ಲಿ ಬಸವಣ್ಣನವರು ಮಾಂಸಾಹಾರಿಗಳು ಲಿಂಗಧಾರಣೆ ಮಾಡಿಕೊಂಡು ಲಿಂಗಪಥಕ್ಕೆ ಬಂದ ಮೇಲೆ ಮಾಂಸಹಾರವನ್ನ ತ್ಯಜಿಸಬೇಕು ಇಲ್ಲದಿದ್ದರೆ ಸಮಾಜದಲ್ಲಿ ಕೆಟ್ಟ ಹೆಸರು ಪಡೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಲಾರರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಲಿಂಗವ ಕಟ್ಟಿದ್ದು ಸಾರ್ಥಕವಾಗಬೇಕೆಂದರೆ ಮಾಂಸಹಾರವನ್ನ ಸಂಪೂರ್ಣ ತ್ಯಜಿಸಲೇಬೇಕು ಎಂಬುದು. ಬಸವಣ್ಣನವರ ಈ ವಚನದ ಮೂಲ ಆಶಯ.

 

ಹೀಗೆ, ಲಿಂಗಾಯತರು ಸಂಪೂರ್ಣವಾಗಿ ಭಾರತೀಯ ಸನಾತನ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದಾರೆ, ಇಂತ ಲಿಂಗಾಯತ ಪರಂಪರೆಯನ್ನ ದುರುದ್ದೇಶದಿಂದ ಬೇರ್ಪಡಿಸಿ ಅದೊಂದು ಸ್ವತಂತ್ರ ಧರ್ಮ ಎಂದು ಹೇಳುತ್ತಾ ಅದನ್ನ ಇಸ್ಲಾಂ ಮತದೊಂದಿಗೆ ಸಮೀಕರಿಸುವುದು ಅಕ್ಷಮ್ಯ ಅಪರಾಧವಲ್ಲದೆ ಇನ್ನೇನು.

 

(ಈ ಲೇಖನದಲ್ಲಿ ಉಲ್ಲೇಖಿಸಿರುವ ವಚನಗಳು ಹಾಗೂ ವಚನಕಾರರ ಮಾಹಿತಿ: ಶ್ರೀ ತರಳಬಾಳು ಜಗದ್ಗುರು ಬ್ರಹನ್ಮಠ, ಸಿರಿಗೇರಿ)

 

ಕಿರಣ್.ಬಿ.


ವಿಜ್ಞಾನ ಸಾರಿದ ವೇದಾಂತ: ನಾವೆಲ್ಲರೂ ಒಂದೇ ತಾಯಿಯ ಮಕ್ಕಳು

12 June, 2026 ವಿಜ್ಞಾನ ಸಾರಿದ ವೇದಾಂತ: ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಭಾರತಿಯರೆಲ್ಲರು ಒಂದೇ ತಾಯಿಯ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ಎಂದು ಹೇಳಿದಾಗ ಅದು ಖಂಡಿ...