
19 ಸೆಪ್ಟೆಂಬರ್.2024.
ಹೊಸ ದಿಗಂತ.
ಇತ್ತೀಚಿಗೆ ಸಾಣಿಹಳ್ಳಿಶ್ರೀಗಳು ಚಿತ್ರದುರ್ಗದಲ್ಲಿ ನಡೆದ "ಸಾರ್ವಜನಿಕ ಕುರ್’ಆನ್ ಪ್ರವಚನ ಕಾರ್ಯಕ್ರಮ" ದಲ್ಲಿ ಭಾಗವಹಿಸಿ ಮಾತನಾಡುತ್ತ ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳು ಬೇರೆ ಬೇರೆ ಆದರೂ ಸಮನಾಗಿ ಕಾಣಬೇಕು ಎಂದು ಕರೆಕೊಟ್ಟ ಹಿನ್ನಲೆಯಲ್ಲಿ ಈ ವಿಷಯ ಸಾಕಷ್ಟು ಚರ್ಚೆಗಳನ್ನ ಹುಟ್ಟು ಹಾಕಿ, ಒಂದಷ್ಟು ಹೊಸ ವಿಚಾರಗಳನ್ನ ಹೊರ ಹಾಕುವಂತೆ ಮಾಡಿದೆ. ತಾತ್ವಿಕವಾಗಿ ಇಸ್ಲಾಂ-ಲಿಂಗಾಯತ ಹೇಗೆ ಸಮಾನವಾಗಲು ಅಸಾಧ್ಯ ಅನ್ನುವ ವಿಚಾರ ಒಂದೆಡೆ ಆದರೆ ಬಸವಣ್ಣನವರ ಕಾಲದ ಹೊತ್ತಿಗೆ ಇಸ್ಲಾಂ ತನ್ನ ಛಾಪು ಮೂಡಿಸಲು ಆರಂಬಿಸಿತ್ತು ಆದರೆ ಅದರ ಅರಿವು ಶರಣವೃಂದಕ್ಕೆ ಇತ್ತೇ ಎಂಬ ಕುತೂಹಲ ಮೂಡದೇ ಇರದು, ಇದಕ್ಕೆ ಉತ್ತರವನ್ನ ಶರಣರ ಹಿನ್ನೆಲೆ ಹಾಗು ವಚನಗಳಿಂದಲೇ ಪಡೆಯಬಹುದು.
ಭಾರತಕ್ಕೆ ಇಸ್ಲಾಂನ ಪ್ರವೇಶ 8ನೇ ಶತಮಾನದಲ್ಲೇ ಕೇರಳದ ಮೂಲಕ ಆಗಿದ್ದು ನಂತರ ಅರಬ್ ವ್ಯಾಪಾರಿಗಳ ಜೊತೆ ಬಂದ ಮತ ಪ್ರಚಾರಕ ಸೂಫಿ ಸಂತರು ಭಾರತದಾದ್ಯಂತ ಸಂಚರಿಸಿ ಮತ ಪ್ರಚಾರ ಮಾಡುತ್ತಾರೆ. 8ನೇ ಶತಮಾನದ ನಂತರ ಇಸ್ಲಾಂ ದಾಳಿಕೋರರು ಹಿಂದೂ ದೇವಾಲಯಗಳನ್ನ ಒಡೆದು ಸಂಪತ್ತನ್ನ ಲೂಟಿ ಮಾಡಿದ್ದು ಇತಿಹಾಸ.ಈ ಸಮಯದಲ್ಲಿ (1025) ಒಡೆದು ಲೂಟಿ ಮಾಡಿದ್ದ ದೇವಾಲಯಗಳಲ್ಲಿ ಒಂದು ಶರಣ ಆದಯ್ಯನವರ ಆರಾಧ್ಯ ದೈವ ಸೌರಾಷ್ಟ್ರದ ಸೋಮೇಶ್ವರನ ದೇವಸ್ಥಾನ ಅಂದ್ರೆ ಇಂದಿನ ಗುಜರಾತಿನ ಸೋಮನಾಥ ದೇವಾಲಯ. ಸಾಸಲು ಗ್ರಾಮ, ಸೌರಾಷ್ಟ್ರ, ಗುಜರಾತ ರಾಜ್ಯದಲ್ಲಿ ಜನಿಸಿದ ಶರಣ ಆದಯ್ಯನವರ ವೃತ್ತಿ ವ್ಯಾಪಾರ ಆಗಿದ್ದು ಕಾರ್ಯಕ್ಷೇತ್ರ ಅಣ್ಣಿಗೇರಿ-ಪುಲಿಗೆರೆ-ಲಕ್ಷ್ಮೇಶ್ವರ-ಕಲ್ಯಾಣ ಆಗಿತ್ತು. ಇವರ ಒಟ್ಟು ೪೦೧ ವಚನಗಳು ಸಿಕ್ಕಿದ್ದು ಅವರ ಅಂಕಿತನಾಮ "ಸೌರಾಷ್ಟ್ರ ಸೋಮೇಶ್ವರ" (ಮಾಹಿತಿ ಮೂಲ: ಶ್ರೀ ತರಳಬಾಳು ಬ್ರಹನ್ಮಠ, ಸಿರಿಗೆರೆ)
ಬಿಜ್ಜಳನ ವಿಶಾಲ ಸಾಮ್ರಾಜ್ಯದ ಮಂತ್ರಿಯಾಗಿದ್ದ ಬಸವಣ್ಣ ಒಬ್ಬ ತತ್ವ ಜ್ಞಾನಿ ಹಾಗೂ ಸಮಾಜಸುಧಾರಣೆಯ ಹರಿಕಾರರಾಗಿದ್ದರು. ಅನುಭವ ಮಂಟಪದಲ್ಲಿ ಸಮಾಜದ ಎಲ್ಲ ವರ್ಗದಿಂದ ಬಂದ ಶರಣರೊಂದಿಗೆ ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸುತ್ತಿದ್ದರು. ಅದಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿ, ಸರಳೀಕರಿಸಿ ಸಮಾಜಕ್ಕೆ ಶಕ್ತಿಯನ್ನು ತುಂಬಿದ್ದವರು. ಇಂತಹ ಮಹಾನ್ ವ್ಯಕ್ತಿಯೊಬ್ಬರಿಗೆ ಶತಮಾನಗಳ ಹಿಂದೆಯೇ ಇಸ್ಲಾಂ ಬಂಡುಕೋರರು ಭಾರತೀಯ ಸಂಸ್ಕೃತಿ ನಾಶ ಹಾಗೂ ಸಂಪತ್ತು ಲೂಟಿಗಾಗಿಯೇ ದಂಡೆತ್ತಿ ಬರುತ್ತಿದ್ದದ್ದರ ಅರಿವು ಇತ್ತು ಎಂಬುದನ್ನ ಈ ಕೆಳಗಿನ ವಚನದ ಮೂಲಕ ತಿಳಿಯ ಬಹುದು.
ಗಾಂಧಾರಿ ಮಾಂಧಾರಿಯೆಂಬ ಅಹೋರಾತ್ರಿಯಲ್ಲಿ
ಲಿಂಗವ ಪೂಜಿಸಬೇಕು.
ಊರ ಕೋಳಿ ಕೂಗದ ಮುನ್ನ,
ಕಾಡನವಿಲು ಒದರದ ಮುನ್ನ,
ಲಿಂಗವ ಪೂಜಿಸಬೇಕು.
*ಗೋವುಗಳ ಕೊಲುವ ಪಾಪಿಯ ದನಿಯ ಕೇಳದ ಮುನ್ನ*,
ತುಂಬಿ ಮುಟ್ಟಿ ಪುಷ್ಪ ನಿರ್ಮಾಲ್ಯವಾಗದ ಮುನ್ನ
ಲಿಂಗವ ಪೂಜಿಸಬೇಕು.
ಅದೆಂತೆಂದಡೆ;
'ಯೋ ಲಿಂಗಮರ್ಧರಾ ತ್ರಾ ತು ಶುಚಿರ್ಭೂತ್ವಾ ಪ್ರಪೂಜಯೇತ್
ಅಗ್ನಿಷ್ಟೋಮಸಹಸ್ರಸ್ಯ ಧರ್ಮಸ್ಯ ಲಭತೇ ಫಲಂ' ಎಂದುದಾಗಿ,
ಶುದ್ಧಾಂತಃಕರಣನಾಗಿ ಶಿವಪೂಜೆಯ ಮಾಡಬೇಕು,
ಆತಂಗೆ ಅಗ್ನಿಷ್ಟೋಮ ಸಹಸ್ರಫಲವಹುದು.
ತನ್ನೊಡನೆ ಮಲಗಿರ್ದ ಸತಿಯನೆಬ್ಬಿಸದೆ ಶಿವಲಿಂಗಕ್ಕೆರೆವ
ಸದ್ಭಕ್ತನ ಶ್ರೀಪಾದವ ತೋರಿ ಬದುಕಿಸಯ್ಯಾ,
ಕೂಡಲಸಂಗಮದೇವಾ
ಮೇಲಿನ ವಚನದಲ್ಲಿ ಶಿವಲಿಂಗ ಪೂಜೆಯನ್ನ ಬೆಳಿಗಿನ ಜಾವದಲ್ಲಿ ಮಾಡಿ ಮುಗಿಸಬೇಕೆಂದು ವಿವರಿಸುವಾಗ ಬರುವ ಸಾಲು “ಗೋವುಗಳ ಕೊಲುವ ಪಾಪಿಯ ದನಿಯ ಕೇಳದ ಮುನ್ನ” ಅಂತ ಹೇಳುವದರ ಹಿಂದಿನ ಅರ್ಥ ಬೆಳಿಗಿನ ಆಜಾನ್ ಕೂಗುವ ಮೊದಲೇ ನಿಮ್ಮ ಲಿಂಗ ಪೂಜೆಯನ್ನ ಮುಗಿಸಬೇಕು ಎಂದು. ಈ ಸಾಲಿನೊಂದಿಗೆ ಇನ್ನೊಂದು ಮಹತ್ವವಾದ ಅಂಶ ಒಳಗೊಂಡಿದೆ, ಅದೆಂದರೆ ಇದರಲ್ಲಿ ಬರುವ "ಪಾಪಿಗಳು" ಪದ, ಖ್ಯಾತ ಸಂಶೋಧಕ ದಿವಂಗತ ಎಂ ಎಂ ಕಲ್ಬುರ್ಗಿಯವರ ಸಂಶೋಧನೆ ಆದರಿಸಿ ಶ್ರೀ ಶಿವಾನಂದ ಜಾಮದಾರರು (ನಿವೃತ್ತ ಐಎಎಸ್ ಅಧಿಕಾರಿ ಹಾಗೂ ದಿವಂಗತ ಕಲ್ಬುರ್ಗಿಯವರ ಆಪ್ತರು) ಒಂದು ಸಂದರ್ಶನದಲ್ಲಿ ಹೇಳುವುದೇನೆಂದರೆ, ಮೂಲದಲ್ಲಿ ಇದ್ದ ಪದ "ಯವನರು" ಅನ್ನೋದನ್ನ ಯಾರೋ ತಿದ್ದಿ ಪಾಪಿಗಳು ಅಂತ ಮಾಡಿದ್ದಾರೆ. ಯವನರು ಅನ್ನುವ ಪದವನ್ನ ಬಸವಣ್ಣವರು ಗೋ ಹಂತಕ ಇಸ್ಲಾಂ ದಾಳಿಕೋರರನ್ನ ಉಲ್ಲೇಖಿಸಿಯೇ ಅನ್ನುವುದು ಸ್ಪಷ್ಟವಾಗುತ್ತದೆ. ಯವನರು ಅಂದರೆ ಗ್ರೀಕರು ಅಥವಾ ಮುಸ್ಲಿಮರು ಎಂದರ್ಥ. ಪದ ಯವನರೇ ಇರಲಿ ಅಥವಾ ಪಾಪಿಗಳೇ ಇರಲಿ, ಆ ಪದದ ಜೊತೆಗಿರುವ ಗೋವುಗಳನ್ನ ಕೊಲ್ಲುವವರ ಧ್ವನಿ ಕೇಳುವ ಮುನ್ನವೇ ಪೂಜೆ ಮುಗಿಸಿ ಅನ್ನುವುದೂ ಮುಖ್ಯವಾಗುತ್ತದೆ ಅಂದರೆ ಬೆಳಿಗಿನ ಆಜಾನ್ ಕರೆ ಕೇಳುವ ಮೊದಲೇ ನಿಮ್ಮ ಲಿಂಗ ಪೂಜೆ ಮಾಡಿ ಮುಗಿಸಿ ಎಂದು ಕರೆ ಕೊಡುವ ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ "ಛಲಬೇಕು ಶರಣಂಗೆ ಪರದೈವವನೊಲ್ಲೆಂಬ" ಅಂತಲೂ ಹೇಳಿದ್ದಾರೆ. ಪರದೈವ ಆರಾಧಕರು ಬಂಜಿಸಿದ ಸೌರಾಷ್ಟ್ರ ಸೋಮೇಶ್ವರನ ಆರಾಧಕ ಆದಯ್ಯನವರ ವಚನದಲ್ಲೂ ಪರದೈವದ ಉಲ್ಲೇಖ ಕೆಳಗಿನ ಈ ವಚನದಲ್ಲಿದೆ:.
ಜಪತಪ ನೇಮವಲ್ಲ, ಮಂತ್ರತಂತ್ರ ನೇಮವಲ್ಲ,
ಧೂಪದೀಪಾರತಿ ನೇಮವಲ್ಲ,
ಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ.
ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲಿದ್ದ ಕಾರಣ ನಿತ್ಯನೇಮ.
ಈ ವಚನದಲ್ಲಿರುವ 'ಪರದೈವ' ಯಾವುದು ಅನ್ನೋದನ್ನ ವಚನಕಾರ ಶರಣ ಆದಯ್ಯನವರ ಹಿನ್ನೆಲೆ ಹಾಗೂ ಅದಕ್ಕೆ ಸಂಬಂದಿತ ಐತಿಹಾಸಿಕ ಘಟನೆ ಮತ್ತು ಮೇಲಿನ ವಿಶ್ಲೇಷಿಸಿತ ಬಸವಣ್ಣನವರ ವಚನವದ ಆಧಾರದಲ್ಲಿ ಅರ್ಥೈಸಿದಾಗ ಆದಯ್ಯನವರು ಅವರ ನೆಚ್ಚಿನ ದೈವ ಸೌರಾಷ್ಟ್ರದ ಸೋಮೇಶ್ವರ ದೇವಾಲಯ ಬಂಜಿಸಿದ ಮೊಹಮ್ಮದ್ ಘಜ್ನಿಯ ದೈವವೇ ಶಿವಭಕ್ತರಿಗೆ ಪರದೈವ. ಅಂತ ಪರದೈವಕ್ಕೆ ಎರಗದೆ ಇರುವುದೇ ನೇಮ ಎಂದಿದ್ದಾರೆ ಹಾಗೂ ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲಿದ್ದ ಕಾರಣ ನಿತ್ಯನೇಮ ಎಂದಿದ್ದಾರೆ, ಅರ್ಥಾತ್ ಬಂಜಕರ ಮೆಟ್ಟಿ ಸೋಮೇಶ್ವರಲಿಂಗ ನಿತ್ಯ ನಿರಂತರವಾಗಿ ನೆಲೆಯಾಗಿರಬೇಕು.
ಪರದೈವದ ಬಗ್ಗೆ ಶರಣರಿಗೆ ಇದ್ದ ತಿರಸ್ಕಾರವನ್ನ ಸಾಣಿಹಳ್ಳಿ ಶ್ರೀಗಳು ಅವಲೋಕಿಸಿ ಬಸವಾನುಯಾಯಿಗಳ ದಿಕ್ಕು ತಪ್ಪಿಸುವಂತ ಸಂದೇಶ ಕೊಡಬಾರದೆನ್ನುವುದು ಬಸವತತ್ವ ಅನುಯಾಯಿಗಳ ಕೋರಿಕೆ.
✍️ ಕಿರಣ್ ಬಿ.