Saturday, March 15, 2025

ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕೆಡಿಸುವ ಬೀಡುಗಳು...

15, ಮಾರ್ಚ್ 2025

ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕದಡುವ ಬೀಡುಗಳ ಅಥವಾ ಶ್ರೇಷ್ಟತೆಯ ವ್ಯಸನಿಗಳ ಮನೋ ವಿಕಾರ ಅನಾವರಣಗೊಳಿಸುವ ಸಾಧನಗಳ ಅನ್ನುವುದನ್ನ ವಿಮರ್ಶಿಸಲೆ ಬೇಕಾದ ಸಂಧರ್ಭಗಳು ಆಗಾಗ್ಗೆ ಬಂದೊದಗುತ್ತಲೇ ಇರುತ್ತವೆ. ಇಂತಹ ಸಂದರ್ಭವೊಂದು ಕ್ಲಬ್ ಹೌಸ್ ಅನ್ನ್ಜುವ ಮಾತಾಡುವ ಜಾಲತಾಣದಲ್ಲಿ ಬಂದಿದ್ದು, ಸಂಪ್ರದಾಯವಾದಿಗಳು ತಮ್ಮ ಸಂಪ್ರದಾಯವೇ ಶ್ರೇಷ್ಠ ಉಳಿದದ್ದು ಕನಿಷ್ಠ ಅನ್ನುವ ಭಾವನೆಯನ್ನ ಬಹಿರಂಗವಾಗಿ ವ್ಯಕ್ತ ಪಡಿಸಿದ್ದನ್ನ ಇಂದು ಅವಲೋಕಿಸೋಣ. ತಮ್ಮ ಸಂಪ್ರದಾಯ ಶ್ರೇಷ್ಠ ಎನ್ನುವುದು ಸರಿಯೇ, ಆದರೆ ಅದನ್ನ ಸಾಬೀತುಮಾಡಲು ಬೇರೊಂದು ಸಂಪ್ರದಾಯವನ್ನು ಉದ್ದೇಶ ಪೂರಿತವಾಗಿ ಅವಹೇಳನ ಮಾಡುವುದು ಅಕ್ಷಮ್ಯವಷ್ಟೆ ಅಲ್ಲದೆ ಕಾನೂನಿನ ರೀತ್ಯ ಶಿಕ್ಷಾರ್ಹ ಅಪರಾಧವಾಗಿದೆ.

"ಕಲ್ಯಾಣದ ಮಂತ್ರಿ ಬಸವಣ್ಣ ಮತ್ತು ಬಾಲ ಸನ್ಯಾಸಿ ಶಂಕರಾಚಾರ್ಯರು" ಎಂಬ ಶೀರ್ಷಿಕೆಯಡಿ ಒಂದು ಚರ್ಚಾ ಕಾರ್ಯಕ್ರಮ ಆಯೋಜಿಸಿ ಅದರಲ್ಲಿ ಬಸವಣ್ಣನವರಿಗೆ ಉದ್ದೇಶಪೂರಿತವಾಗಿ ಅವಹೇಳನ ಮಾಡುವ ಹುನ್ನಾರ ನಡೆಸಿದ್ದು ಈ ಕೆಳಗಿನಂತಿದೆ.

1. ತಾವು ದ್ವೇಷಿಸುವ ಬಸವಣ್ಣನವರಿಗೆ ಬಸವಣ್ಣ  ಎಂದು ಏಕವಚನ ಸಂಭೋಧನೆ ಮಾಡಿದ್ದರೆ ತಮ್ಮ ಪ್ರೀತಿಪಾತ್ರರಿಗೆ  ಶಂಕರಾಚಾರ್ಯರರು ಎಂದು ಗೌರವಯುತವಾದ ಸಂಭೋದನೆ.


2. ಬಸವಣ್ಣನವರು ಯಾವುದೇ ತತ್ವ ಜ್ಞಾನಿಯಲ್ಲ ಬದಲಿಗೆ ಅವರು ಒಂದು ಸಮೃದ್ದ ರಾಜ್ಯದ ಮಂತ್ರಿಯಾಗಿದ್ದರು, ಆದರೆ ಶಂಕರಾಚಾರ್ಯರು ಬಾಲ ಸನ್ಯಾಸಿ ಆಗಿದ್ದು ಅದ್ವೈತ ಸಿದ್ದಾಂತದ ಪ್ರತಿಪಾದಕರಾಗಿದ್ದರು ಎಂದು ಪ್ರತಿಪಾದಿಸಲಾಗಿತ್ತು.

3. ಬಸವಣ್ಣನವರು ಸಂಸಾರಿ ಆಗಿದ್ದು ಸಕಲ ಭೋಗಗಳನ್ನ ಅನುಭವಿಸಿದವರು, ಆದರೆ ಶಂಕರಾಚಾರ್ಯರು ಬಾಲ ಸನ್ಯಾಸಿಯಾಗಿ ಅವರ ಜೀವಿತದ ಕೇವಲ 32  ವರ್ಷಗಳಲ್ಲಿ ಇಡೀ ಭಾರತ ಸುತ್ತಿ ಧರ್ಮವನ್ನು ಮರು ಸ್ಥಾಪಿಸಿದವರು. ಇವರು ಪ್ರತಿಪಾದಿಸುತ್ತಿರುವುದು ಯಾವ ಧರ್ಮ ಎಂದು ಇವರಿಗೆ ಸ್ಪಷ್ಟತೆ ಇದ್ದಂತಿದೆ, ಅದು ಖಂಡಿತ ಹಿಂದೂ ಧರ್ಮವಾಗಿರಲು ಸಾಧ್ಯವಿಲ್ಲ. ಇದನ್ನ ಈ ಕಾರ್ಯಕ್ರಮ ರೂಪಿಸಿದ ಅರಸೀಕೆರೆ ತಾಲೂಕು ಮೂಲದ ಅಶ್ವಿನಿ ಎಂಬ ಯುವತಿ ಎಲ್ಲ ವೇಧಿಕೆಗಳಲ್ಲಿ ಹೇಳುತ್ತಲೇ ಬಂದಿದ್ದಾಳೆ.

4. ಇನ್ನೊಂದು ಗಹನವಾದ ವಿಚಾರ ಚರ್ಚಿಸಿದ್ದು ಅಂದರೆ, ಇಬ್ಬರು ಗುರುಗಳಲ್ಲಿ ಒಬ್ಬರು ಸಮಾನತೆ ಮೆರೆದರೆ ಇನ್ನೊಬ್ಬರು ಅಸಮಾನತೆ ಸಾರಿದವರೆಂದು. ಈ ವಿಷಯವನ್ನ ಪ್ರಸ್ತುತ ಪಡಿಸಲು ಬಸವಣ್ಣನವರ ಹಲವು ವಚನಗಳನ್ನ ಉಲ್ಲೇಖಿಸಿ ಇವರು ಹರಿ ಮತ್ತು ಹರರಲ್ಲಿ ಬೇದ ಮಾಡಿದ್ದಾರೆ, ದೇವರಲ್ಲಿ ಅಸಮಾನತೆ ಮತ್ತು ವೈರತ್ವ ಸಾರಿದ್ದಾರೆಂದು, ಮತ್ತು ಶಂಕರಾಚಾರ್ಯರು ಹರಿ ಮತ್ತು ಹರರಲ್ಲಿ ಬೇದ ಬಾವ ಅಳಿಸಿ ಹಾಕಿ ಎಲ್ಲರಿಗೂ ಎಲ್ಲ ದೇವರನ್ನು ಸಮಾನವಾಗಿ ಪೂಜಿಸುವ ಅವಕಾಶ ಮಾಡಿಕೊಟ್ಟಿದ್ದಾರೆಂದು ಪ್ರತಿಪಾದಿಸಲಾಯಿತು.

ಇಲ್ಲಿ, ಬಸವಣ್ಣನವರು ಶಿವ ಪಂತಕ್ಕೆ ಬಂದವರು ತಮ್ಮ ಹಳೆಯ ಸಂಪ್ರದಾಯದ ಪೂಜೆ ಹೋಮ ಹವನಗಳಲ್ಲಿ ತಮ್ಮ ಸಮಯ ವ್ಯರ್ಥ ಮಾಡದೆ ಕಾಯಕದಲ್ಲಿ ತೊಡಗಲೆಂದು ಮತ್ತು ಏಕದೇವೋಪಸನೆ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎನ್ನುವ ಕಾರಣಕ್ಕೆ ಹೇಳಿದ್ದಾರೆ. ಇದು ಶಿವಯೋಗ ಧ್ಯಾನ  (ಶಿವ ಪೂಜೆ ಮಾಡುವ ವಿಧಾನವೇ ಒಂದು ಧ್ಯಾನ) ದಿಂದ ಸಾಬೀತಾಗಿದೆ. ಈ ಅವಕಾಶವನ್ನ ಬಸವಣ್ಣನವರು ಶೂದ್ರರೆಂದು ಕಡೆಗಾಣಿಸಿದವರಿಗೂ ಮತ್ತು ಮಹಿಳೆಯರಿಗೂ ಮಾಡಿಕೊಟ್ಟು ಮಹಾನ್ ಮಾನವತವಾದ ಪ್ರತಿಪಾದಿಸಿದ್ದಲ್ಲದೆ, ಆಚರಣೆಗೂ ತಂದರು. ಆದರೆ ಶಂಕರಾಚಾರ್ಯರು, ಬ್ರಹ್ಮಸೂತ್ರದಲ್ಲಿರುವ ಶೂದ್ರ ಮತ್ತು ಮಹಿಳೆಯರಿಗೆ ವೇದಾಧ್ಯಯನದ ಹಕ್ಕಿಲ್ಲ ಎಂಬ ಈ ಘೋರ ಅಸಮಾನತೆಯನ್ನ ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ವಿರೋದ ವ್ಯಕ್ತಪಡಿಸುವ ಎಡಪಂತಿಯರು ಪ್ರತಿಪಾದಿಸಿದ್ದಾರೆ. 

ಹಾಗಾದರೆ, ದೇವರಲ್ಲಿ ಸಮಾನತೆ ತಂದು ಜನರಲ್ಲಿ ಅಸಮಾನತೆ ಉಳಿಸಿಕೊಂಡ ಶಂಕರಾಚಾರ್ಯರು ಮೇಲೊ ಅಥವಾ ಅಸ್ಪೃಶರು, ಹಿಂದುಳಿದವರಿಗೆ ಸಮಾನ ಬಾಳ್ವೆಗೆ ಅವಕಾಶ ಮಾಡಿ ಕೊಟ್ಟ ಬಸವಣ್ಣನವರು ಮೇಲೊ ಅನ್ನೋ ಪ್ರಶ್ನೆ ಎತ್ತಿ ಶಂಕರಾಚಾರ್ಯರನ್ನ ನಿಂದಿಸುವ ಕೆಲಸವೂ ಇದೆ ಕ್ಲಬ್ ಹೌಸ್ ನಲ್ಲಿ ಮತ್ತೊಂದು ಕಾರ್ಯಕ್ರಮದಲ್ಲಿ ಎಡ ಚಿಂತನೆಯ ಜನರು ಮಾಡಿದ್ದಾರೆ.


ಅಷ್ಟೇ ಅಲ್ಲದೆ ಶಂಕರಾಚಾರ್ಯರು ಹೆಣ್ಣು ಮಕ್ಕಳು ನಿತ್ಯ ನಾರಕಿಯೆಂದು ಹೇಳಿದರೆ ಬಸವಣ್ಣ ತನ್ನ ಸ್ವಂತ ಅಕ್ಕಳಿಗೆ ಯಾಕೆ ಉಪನಯನದ ಹಕ್ಕಿಲ್ಲ ಎಂದು  ಪ್ರಶ್ನಿಸಿದವರು ಮತ್ತು ಮುಂದೆಯೂ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟು, ಇಡೀ ಪ್ರಪಂಚಕ್ಕೆ ಸಂಸತ್ತಿನ, ಪ್ರಜಾತಾಂತ್ರಿಕತೆಯ, ಸಮಾನತೆಯ ಮುನ್ನುಡಿ ಬರೆದವರು ವಿಶ್ವಗುರು ಬಸವಣ್ಣ.

5. ಬಸವಣ್ಣನವರು ಕಲ್ಯಾಣದ ಸಕಲ ವೈಭೋಗದ ಮಂತ್ರಿ ಎಂದವರು ತಮ್ಮ ಮನೋ ವಿಕೃತವನ್ನ ಮುಂದುವರೆಸುತ್ತಾ ಬಸವಣ್ಣನವರದ್ದೇ ಕೆಳಗಿನ ಒಂದು ವಚನ ಓದಿ, ಅವರ ಹುಟ್ಟನ್ನೇ ಪ್ರಶ್ನಿಸುತ್ತಾರೆ. 

ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು- ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು; ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ.

ಈ ವಚನವನ್ನಓದುವ ಯಾವುದೇ ಸಂದರ್ಭಇಲ್ಲದಿದ್ದರೂ ಬೇಕಂತಲೆ ಓದಿ ಬಸವಣ್ಣನವರ ಹುಟ್ಟನ್ನ ಪ್ರಶ್ನಿಸಿ ಈ ವಚನ ಪ್ರಕ್ಷಿಪ್ತ (ಸೇರಿಸಿದ್ದು) ಇರಬಹುದು ನನಗೆ ಗೊತ್ತಿಲ್ಲ ಅಂತ ನಾಟಕವನ್ನೂ ಆಡಿ ತಮ್ಮ ಮನೋ ವಿಕೃತಿ ಮೆರೆದಿದ್ದಾರೆ. ಆದರೆ ಈ ವಚನ ಪ್ರಕ್ಷಿಪ್ತವಲ್ಲ. ಬದಲಿಗೆ ಇದು ಬಸವಣ್ಣನವರೇ ಬರೆದ ವಚನ ಆಗಿದ್ದು ವಚನ ಸಾಹಿತ್ಯ ಮತ್ತು ಕಲ್ಯಾಣದ ಇತಿಹಾಸ ಅರಿತವರು ಅದರ ಸಂದರ್ಭವನ್ನ ಅರಿಯಬಲ್ಲರು. ಆದರೆ ಅವಹೇಳನ ಮಾಡಲೇ ಬೇಕು ಅಂತ ನಿರ್ದರಿಸಿ out of context ಇದನ್ನ ಉಲ್ಲೇಖಿಸಿ ಕೇಳುಗರ ಮನಸಿನಲ್ಲಿ ಗೊಂದಲ ಉಂಟು ಮಾಡುವುದಲ್ಲದೆ ಬಸವಣ್ಣನವರ ಬಗ್ಗೆ ಅಸಹ್ಯ ಹುಟ್ಟಿಸುವುದೇ  ಮೂಲ ಉದ್ದೇಶವಾಗಿತ್ತು.

ಬಸವಣ್ಣನವರ ವಚನಗಳನ್ನ ಸಮಗ್ರವಾಗಿ ಅಧ್ಯಾಯನ ಮಾಡಿದ್ದರೆ ಇದನ್ನ ಯಾವ ಸಂದರ್ಭದಲ್ಲಿ ಬರೆದಿದ್ದರು ಅನ್ನುವ ಅರಿವು ಸುಲಭವಾಗಿಯೇ ಆಗುತ್ತಿತ್ತು. ಆದರೆ ಈ ವಚನವನ್ನ ಚೆರ್ರಿ ಪಿಕ್ ಮಾಡಿದ್ದರ ಉದ್ದೇಶ ಅದನ್ನ ಅರ್ಥ ಮಾಡಿಕೊಳ್ಳುವ ಬದಲಿಗೆ ಕೇವಲ ಶಂಕರಾಚಾರ್ಯರ ಜೊತೆ ಹೋಲಿಸಿ ಬಸವಣ್ಣನವರನ್ನ ಅವಹೇಳನ ಮಾಡುವುದಾಗಿತ್ತು.

ಈ ವಚನವನ್ನ ಬಸವಣ್ಣನವರು ಯಾವ ಸಂದರ್ಭಕ್ಕೆ ಯಾಕೆ ಬರೆದಿದ್ದರು ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೊಟ್ಟಿರುವ ವ್ಯಾಖ್ಯಾಯನ ಈ ಕೆಳಗಿನಂತೆ ಸುಸ್ಪಷ್ಟವಾಗಿದೆ.

ಹುಟ್ಟಿನಿಂದ ಕೀಳು ಎಂಬುದಿಲ್ಲ: ಸಮಾಜದ ನೆಮ್ಮದಿಗೆ ಭಂಗವುಂಟುಮಾಡುವುದೆಂಬ ಕಾರಣದಿಂದಲೇ ಬಸವಣ್ಣನವರು ಉತ್ತಮ ಕುಲವೆನಿಸಿದ್ದ ತಮ್ಮ ಬ್ರಾಹ್ಮಣ ಜಾತಿಯನ್ನು ಸಂಪೂರ್ಣವಾಗಿ ತ್ಯಜಿಸಿ ಬಂದಿದ್ದರೂ ಕೆಲವರು ಮಾತ್ರ ಅವರು ಉಚ್ಚ ಕುಲದಲ್ಲಿ ಹುಟ್ಟಿದವರೆಂಬ ಭಾವನೆಯನ್ನು ಇರಿಸಿಕೊಂಡೇ ಅವರನ್ನು ಗೌರವದಿಂದ ಕಾಣುತ್ತಿದ್ದರೆಂದು ಈ ಹಿಂದೆ ನೋಡಿದೆವು. ಜಾತಿರಹಿತ ಸಮಾಜದ ನಿರ್ಮಾಣದಲ್ಲಿ ನಿರತರಾಗಿದ್ದ ಬಸವಣ್ಣನವರಿಗೆ ಹೀಗೆ ಜಾತಿಯ ಕಾರಣದಿಂದಲೇ ದೊರೆಯುವ ಗೌರವ ಆದರಗಳು ಅವರ ಭಾವನೆಯನ್ನೇ ಕೆಣಕಿ ಭಾವೋದ್ರೇಕಕ್ಕೆ ಎಡೆಮಾಡುತ್ತವೆ. ಅಂತಹ ಬಾವೋದ್ರೇಕದಲ್ಲಿ ನುಡಿದುದೇ ಪ್ರಸ್ತುತ ವಚನ. ತಮ್ಮನ್ನು ಉತ್ತಮ ಕುಲದವರೆಂದು ಜನ ತಿಳಿಯುವುದು ತಾವು ಮೊದಲು ಬ್ರಾಹ್ಮಣರಾಗಿದ್ದರೆಂಬ ಕಾರಣದಿಂದಲೇ ಅಲ್ಲವೇ ಎಂದು ‘ನಾನು ಬ್ರಾಹ್ಮಣನೇ ಅಲ್ಲ, ನಾನು ಬ್ರಾಹ್ಮಣ ವಂಶದಲ್ಲಿ ಹುಟ್ಟಿಯೇ ಇಲ್ಲ’ ಎನ್ನುತ್ತಾರೆ. ತಮ್ಮ ಹುಟ್ಟಿದ ಬಗೆಯನ್ನು ಅತ್ಯಂತ ನಿಮ್ನ ರೀತಿಯಲ್ಲಿ ಕಲ್ಪಿಸಿ ಹೇಳುತ್ತಾರೆ. ‘ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು ಇವರಿಬ್ಬರು ಹೊಲದಲ್ಲಿ ಬೆರಣಿಗೆ ಹೋಗಿ ಸಂಗವ ಮಾಡಿದರು, ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ....’ ಚೆನ್ನಯ್ಯ ಸಾಮಾನ್ಯ ಜನರ ದೃಷ್ಟಿಯಲ್ಲಿ ಮಾದಿಗ, ಅಂತೆಯೇ ಕಕ್ಕಯ್ಯ ಡೋಹಾರ. ಹೀಗಿರುವಾಗ ಅವರೀರ್ವರ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ದಾಸಿಯರು ಲೋಕದ ದೃಷ್ಟಿಯಲ್ಲಿಅದೆಷ್ಟು ನಿಮ್ನ ವರ್ಗದವರಾಗಿರಬೇಕು! ಚೆನ್ನಯ್ಯನ ಮನೆಯಲ್ಲಿರುವ ಆ ದಾಸಿಯ ಮಗನಿಗೂ ಕಕ್ಕಯ್ಯನ ಮನೆಯ ಆ ದಾಸಿ ಮಗಳಿಗೂ ನಾನು ಬಸವಣ್ಣ, ಹುಟ್ಟಿದೆನೆಂದಮೇಲೆ ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಮಾತಾದರೂ ಎಲ್ಲಿ ಅವರಾದರೂ ಮದುವೆಯಾದ ದಂಪತಿಗಳೇ? ಅದೂ ಇಲ್ಲ. ಹೊಲದಲ್ಲಿ ಇಬ್ಬರೂ ಬೆರಣಿಯನ್ನಾರಿಸಲು ಹೋಗಿದ್ದರು. ಆಗ ಪರಸ್ಪರ ಆಕರ್ಷಿತರಾಗಿ ಕೂಡಿಕೊಂಡರು. ಆ ಕಾರಣದಿಂದ ನಾನು ಹುಟ್ಟಿದೆ ಎಂದು ಬಸವಣ್ಣನವರು ಎಷ್ಟು ಸಾಧ್ಯವೋ ಅಷ್ಟು ನಿಕೃಷ್ಟವಾಗಿ ತಮ್ಮ ಜನ್ಮವನ್ನು ಕಲ್ಪಿಸಿ ಹೇಳಿದ್ದಾರೆ. ಹೀಗೆ ಮದುವೆಯಾಗದವರಿಗೆ ಹುಟ್ಟಿದ ನನ್ನನ್ನೇ ಉತ್ತಮನೆಂದು ಕರೆದು ಗೌರವಿಸುವುದಾದರೆ ನಿಜವಾದ ತಂದೆ-ತಾಯಿಗಳಿಗೆ ಹುಟ್ಟಿದ ದಾಸಯ್ಯ, ಕಕ್ಕಯ್ಯಗಳು ಅದೆಂತು ಕೀಳಾಗಬಲ್ಲರು? ಎಂಬುದೇ ಇಲ್ಲಿಯ ಇಂಗಿತಾರ್ಥ.

ಈ ವಚನವನ್ನ ಅರ್ಥ ಮಾಡಿಕೊಳ್ಳಲು ನಿಜವಾದ ಹಿಂದೂ ಮನಸ್ಸು ಬೇಕೆ ಹೊರತು ಒಬ್ಬ ಜಾತಿವಾದಿ ಅಥವಾ ಸಂಪ್ರದಾಯವಾದಿಗೆ ಇದರ ಗಾಡತೆ ನಿಲುಕಲು ಸಾಧ್ಯವಿಲ್ಲದ್ದು. ಅಸ್ಪೃಶ್ಯ ಮತ್ತು ಹಿಂದುಳಿದವರಿಗೆ ಸಮಾನತೆ ಕೊಟ್ಟಾಗ ಆ ಅವತಾರ ಪುರುಷ ವಿಶ್ವಗುರು ಬಸವಣ್ಣನವರ ಮೇಲೆ ಅಪಾರ ಗೌರವ ಹುಟ್ಟುವುದು ಸರ್ವೇ ಸಾಮಾನ್ಯ. ಆಗ ತನ್ನನ್ನು ಒಬ್ಬ ಸಾಮಾನ್ಯನಂತೆ ಕಾಣಿ ಎಂದು ಹೇಳಲು ಈ ರೀತಿ ವಚನವನ್ನ ಬರೆದಿದ್ದಾರೆ. ಆದರೆ, ಬಸವ ದ್ವೇಷಿಗಳು ಮತ್ತು ಬಸವಣ್ಣನವರ ಅವಹೇಳನದ ಉದ್ದೇಶದಿಂದಲೆ ಈ ವಚನವನ್ನ ಓದಿದ ಯುವತಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 302 ರ ಅಡಿಯಲ್ಲಿ ಶಿಕ್ಷಾರ್ಹಳು.

ಇಂದು ಈ ರೀತಿ ಬಸವಣ್ಣನವರ ಅವಹೇಳನ ಮಾಡುತ್ತಿರುವ ಸಂಪ್ರದಾಯವಾದಿಗಳೆ ಅಂದು 12 ನೇ ಶತಮಾನದಲ್ಲಿ ಶಿವ ಶರಣರ ಮಾರಣ ಹೋಮ ಮಾಡಿದ ಸಂಪ್ರದಾಯವಾದಿಗಳ ವಾರಸುದಾರರಂತೆ  ವರ್ತಿಸುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ.
 

ಇಷ್ಟೆಲ್ಲ ಆದ ಮೇಲೂ ಮತ್ತೆ ಮತ್ತೆ ಇದೆ ಸಂಪ್ರದಾಯವಾದಿ ಮನಸ್ಥಿತಿಯ ಯುವತಿ ಶಂಕರಾಚಾರ್ಯರು ಮತ್ತು ಬಸವಣ್ಣನವರ ಹೋಲಿಕೆ ಮಾಡಿ ಬಸವಣ್ಣನವರನ್ನ ಅವಹೇಳನ ಮಾಡಲು ಹೋಗಿ ಬಸವಣ್ಣ ಮತ್ತು ಶಂಕರಾಚಾರ್ಯರು ಇಬ್ಬರನ್ನೂ ಅವಹೇಳನ ಮಾಡಿಸಿದ ಅಪಕೀರ್ತಿ ಹಾಸನ ಜಿಲ್ಲೆಯವಳು ಎಂದು ಹೇಳಿ ಕೊಳ್ಳುವ ಅಶ್ವಿನಿ ಎಂಬ ಯುವತಿಗೆ ಸೇರುತ್ತದೆ.  

ಸಂಪ್ರದಾಯವಾದಿಗಳು ಕ್ಲಬ್ ಹೌಸ್ ನಲ್ಲಿ ಬಸವಣ್ಣನವರನ್ನ ಅವಹೇಳನ ಮಾಡಿದ್ದು ಇದು ಮೊದಲೂ ಅಲ್ಲ, ಬಹುಶಃ ಕೊನೆಯೂ ಅಲ್ಲ. ಹಿಂದೊಮ್ಮೆ  ಶಿವಮೊಗ್ಗದ ದಿಲೀಪ್ ನಾಡಿಗ್ ಎಂಬ ವ್ಯಕ್ತಿ ತನ್ನ ಸಂಪ್ರದಾಯ ವಿವರಿಸುವಾಗ ಪ್ರಶ್ನೆ ಒಂದಕ್ಕೆ ಉತ್ತರಿಸುವಾಗ ಜನಿವಾರ ತೆಗೆದ ಬಸವಣ್ಣ ಕೂಡ  ಚಾಂಡಾಲ ಅಂತ ಹೇಳಲು ಯಾವುದೇ ಮುಜುಗರ ಪಡಲಿಲ್ಲ, ಇಂದಿಗೂ ಆ ಮಾತಿಗೆ ಪಶ್ಚಾತ್ತಾಪ ಪಟ್ಟಿಲ್ಲ. ಬದಲಿಗೆ ಬಸವಣ್ಣನವರನ್ನು ಪದೇ ಪದೇ ಅವಹೇಳನ ಮಾಡಿದ ಅಶ್ವಿನೀ ಎಂಬ ಯುವತಿಯ ಬೆಂಬಲಕ್ಕೆ ನಿಂತಿದ್ದು ಈ ಸಂಪ್ರದಾಯವಾದಿಗಳ ಮನಸ್ಥಿತಿಗೆ ಹಿಡಿದ ಕನ್ನಡಿಯಂತಾಗಿದೆ.

ಈ ರೀತಿ ಮುಂದುವರೆದ ಬಸವಣ್ಣನವರ ಉದ್ದೇಶಪೂರಿತ ಅವಹೇಳನಕ್ಕೆ ಕಡಿವಾಣ ಹಾಕಬೇಕು ಎಂದರೆ ಕರ್ನಾಟಕದಾದ್ಯಂತ ಇಂತವರ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 302 ರ ಅಡಿ ಪ್ರಕರಣ ದಾಖಲಿಸಿ ಸರಿಯಾದ ಶಾಸ್ತಿ ಮಾಡಲೇ ಬೇಕಿದೆ. ಈ ಲೇಖನ ಆಧರಿಸಿ ದೂರು ದಾಖಲಿಸಲು ಇಚ್ಚಿಸುವವರು ನನ್ನನ್ನು ಸಂಪರ್ಕಿಸಿದರೆ, ನಾನು ಎಲ್ಲಾ ದೂರುಗಳಿಗೂ ಸಾಕ್ಷಿಯಾಗಿ ನಿಲ್ಲಲು ಸಿದ್ದನಿದ್ದೇನೆ.

- ಕಿರಣ್. ಬಿ.

ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕೆಡಿಸುವ ಬೀಡುಗಳು...

15, ಮಾರ್ಚ್ 2025 ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕದಡುವ ಬೀಡುಗಳ ಅಥವಾ ಶ್ರೇಷ್ಟತೆಯ ವ್ಯಸನಿಗಳ ಮನೋ ವಿಕಾರ ಅನಾವರಣಗೊಳಿಸುವ ಸಾಧನಗಳ ಅನ್ನುವುದನ್ನ ವಿಮರ್ಶಿಸ...